ಗಂಜಿಮಠದಲ್ಲಿ ಟ್ರಾಫಿಕ್ ಜಾಮ್: ಹಾಲ್ ಮಾಲಿಕರು, ಆಯೋಜಕರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಮಂಗಳೂರು ತಾಲೂಕಿನ ಗಂಜಿಮಠದ ಮುಚ್ಚೂರು ಕ್ರಾಸ್ ಬಳಿ ಮದುವೆ ಕಾರ್ಯಕ್ರಮದ ವೇಳೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲ್ ಮಾಲಿಕರು ಹಾಗೂ ಆಯೋಜಕರ ವಿರುದ್ಧ ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಏಪ್ರಿಲ್ 12, 2026 ರಂದು ಮಧ್ಯಾಹ್ನ 12 ರಿಂದ 2 ಗಂಟೆಯ ನಡುವೆ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ಮಾಲಿಕರು ಮದುವೆ ಕಾರ್ಯಕ್ರಮಕ್ಕೆ ಬಂದ ವಾಹನಗಳಿಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೇ, ರಾಷ್ಟ್ರೀಯ ಹೆದ್ದಾರಿ 169 ಮೇಲೆ ವಾಹನಗಳನ್ನು ನಿಲುಗಡೆ ಮಾಡಿಸಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ಟ್ರಾಫಿಕ್ ಜಾಮ್ ಆಗಿದ್ದು, ಸಾರ್ವಜನಿಕರಿಗೆ ತೊಂದರೆ ಹಾಗೂ ಅಪಾಯ ಉಂಟಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 73/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 285, 292 ಹಾಗೂ ಐಎಂವಿ ಕಾಯ್ದೆಯ ಕಲಂ 122ರಂತೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.













