ಮಂಗಳೂರು (ಕರ್ನಾಟಕ ವಾರ್ತೆ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ನದಿಗಳು ತುಂಬಿ ಹರಿಯುತ್ತಿದ್ದರೂ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಲು ಸ್ವಚ್ಛಭಾರತ್ ಅಭಿಯಾನದಡಿ ಜಿಲ್ಲೆಯ ಎಲ್ಲ ತಾಲೂಕುಗಳ ಆಯ್ದ ಗ್ರಾಮ ಪಂಚಾಯತ್ಗಳಲ್ಲಿ ನಡೆಸುವ ಜಾಗೃತಿ ಪ್ರಚಾರ ಕಾರ್ಯಕ್ಕೆ ಇಂದು ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಕುಡಿಯುವ ನೀರಿನ ಮಹತ್ವ ಅರಿತು ಅದರ ವ್ಯವಸ್ಥಿತ ಬಳಕೆ ಮತ್ತು ನೀರಿನ ಗುಣಮಟ್ಟ ಕಾಪಾಡಲು ನಾವು ಕಾರ್ಯೋನ್ಮುಖರಾಗದಿದ್ದರೆ, ನಮ್ಮ ಭವಿಷ್ಯವೇ ಕರಾಳವಾಗಲಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ನೀರಿನ ಸದ್ಭಳಕೆ ಮತ್ತು ನೈರ್ಮಲ್ಯ ಕಾಪಾಡುವುದು ನಮ್ಮ ದೈನಂದಿನ ಜೀವನದ ಭಾಗವಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಸತೀಶ್ ಕುಂಪಲ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಮಾತನಾಡಿ, ಸ್ವಚ್ಛ ಭಾರತ ಅಭಿಯಾನದಡಿ ಎಲ್ಲಾ ಇಲಾಖೆಗಳನ್ನು ಜೋಡಿಸಿ ಕಾರ್ಯಕ್ರಮ ನಡೆಸಲಾಗುತ್ತದೆ. ಶುದ್ಧ ಕುಡಿಯುವ ನೀರು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸದಿದ್ದರೆ, ಸಾರ್ವಜನಿಕ ಆರೋಗ್ಯದ ಸಮಸ್ಯೆ ಉಂಟಾಗಲಿದೆ. ಈ ನಿಟ್ಟಿನಲ್ಲಿ ಈ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 20 ಗ್ರಾಮ ಪಂಚಾಯತ್ಗಳಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಕಾರಿ ಅಭಿಯಂತರ ಜಯಪ್ರಕಾಶ್, ಸ್ವಚ್ಛಭಾರತ್ ಮಿಶನ್ ಜಿಲ್ಲಾ ಮೇಲ್ವಿಚಾರಕಿ ಮಂಜುಳಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ಖ್ಯಾತ ತೊಗಲುಗೊಂಬೆ ಕಲಾವಿದ ಹಾಸನದ ಗುಂಡೂರಾಜ್ ಅವರ ಕಲಾತಂಡದಿಂದ ಆಯ್ದ ಗ್ರಾ.ಪಂ.ಗಳಲ್ಲಿ ಜಾಗೃತಿ ಮೂಡಿಸುವ ತೊಗಲುಗೊಂಬೆ ಕಾರ್ಯಕ್ರಮ ನಡೆಯಲಿದೆ.














