ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ

Spread the love

ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ

ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆದು ವಂಚನೆ ಮಾಡಲು ಯತ್ನಿಸಿದ್ದ ಇಬ್ಬರನ್ನು ಕಡಬ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಜುಲೈ 3ರಂದು ಸಂಜೆ ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವ ಕುರಿತು ಮಾಹಿತಿ ಪಡೆದ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅವರನ್ನು ವಿಚಾರಣೆ ನಡೆಸಿದರು. ಈ ವೇಳೆ ಬ್ಯಾಂಕ್‌ನಲ್ಲಿ ಸುಮಾರು 120 ಗ್ರಾಂ ಚಿನ್ನಾಭರಣವನ್ನು ಅಡವಿಡಲು ಬಂದಿರುವುದಾಗಿ ಅವರು ತಿಳಿಸಿದ್ದರು. ಅವರ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆತಂದರು.

ವಿಚಾರಣೆಯಲ್ಲಿ ಆರೋಪಿಗಳು ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ.

ಅವರ ಬಳಿಯಿದ್ದ ಚಿನ್ನಾಭರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಆರೋಪಿಗಳು ಒದಗಿಸದಿದ್ದು, ಸಮರ್ಪಕ ಮಾಹಿತಿಯನ್ನೂ ನೀಡಲಿಲ್ಲ. ಬಳಿಕ ನಡೆಸಿದ ವಿಚಾರಣೆಯಲ್ಲಿ ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಬ್ಯಾಂಕ್‌ಗೆ ವಂಚನೆ ಎಸಗಿ ಹಣ ಪಡೆಯುವ ಉದ್ದೇಶದಿಂದ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 83/2026ರಡಿ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 318(4) ಹಾಗೂ 62ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


Spread the love
Subscribe
Notify of

0 Comments