ಜೂನ್‌ 21ರಂದು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ: ಮೋಹನ ಆಳ್ವ

ಜೂನ್‌ 21ರಂದು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ: ಮೋಹನ ಆಳ್ವ

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 11ನೇ ಆಳ್ವಾಸ್ ಪ್ರಗತಿ– ಬೃಹತ್ ಉದ್ಯೋಗ ಮೇಳವು ಜೂನ್ 21 ಮತ್ತು 22ರಂದು ವಿದ್ಯಾಗಿರಿಯ ಆವರಣದಲ್ಲಿ ನಡೆಯಲಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಮೋಹನ ಆಳ್ವ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಐಟಿ, ಐಟಿಎಸ್, ಉತ್ಪಾದನೆ, ಆರೋಗ್ಯ ರಕ್ಷಣೆ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೊಮೊಬೈಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಹಾಸ್ಪಿಟಾಲಿಟಿ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪನಿಗಳು ಭಾಗವಹಿಸಲಿವೆ. ಪದವಿ ಮತ್ತು ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಆರ್ಟ್ಸ್, ಕಾಮರ್ಸ್ ಹಾಗೂ ಮ್ಯಾನೇಜ್‌ಮೆಂಟ್, ಬೇಸಿಕ್‌ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಅಥವಾ ಇತರ ವಿದ್ಯಾರ್ಹತೆ ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿವೆ’ ಎಂದು ಹೇಳಿದರು.

‘ಅಭ್ಯರ್ಥಿಗಳಿಗೆ ಆನ್‌ಲೈನ್‌ ನೋಂದಣಿ ಕಡ್ಡಾಯವಾಗಿದ್ದು, ನೋಂದಾವಣಿ ಪ್ರಕ್ರಿಯೆ ಎಲ್ಲಾ ಅಭ್ಯರ್ಥಿಗಳಿಗೆ ಮುಕ್ತವಾಗಿದೆ. http:/alvaspragati.com ನಲ್ಲಿ ನೋಂದಾಯಿಸಬಹುದು. 58 ಪ್ರತಿಷ್ಠಿತ ಕಂಪನಿಗಳು ಈಗಾಗಲೇ ನೋಂದಾಯಿಸಿಕೊಂಡಿಸಿದ್ದು, 187 ಕಂಪನಿಗಳು ತಮ್ಮ ಭಾಗವಹಿಸುವಿಕೆಯನ್ನು ತಿಳಿಸಿವೆ. ಬಿ.ಕಾಂ., ಎಂ.ಬಿ.ಎ., ಎಂ.ಕಾಂ., ಬಿಬಿಎಂ, ಬಿಎಸ್ಸಿ ಪದವೀಧರರಿಗೆ ಈ ಬಾರಿಯ ಉದ್ಯೋಗ ಮೇಳದಲ್ಲಿ ಹೆಚ್ಚಿನ ಅವಕಾಶ ಇದೆ’ ಎಂದರು.

ಭಾಗವಹಿಸುವ ಪ್ರಮುಖ ಕಂಪನಿಗಳು: ಕಿರ್ಲೋಸ್ಕರ್‌ ಟೊಯೋಟೊ ಟೆಕ್ಸ್‌ಟೈಲ್‌ ಮಷಿನರಿ, ಟೊಯೋಟೊ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ, ಅಜೆಕ್ಸ್ ಫಿಯೋರಿ, ನೆಕ್ಸ್‌ಟೀರ್, ಏಸ್ ಮ್ಯಾನುಫ್ಯಾಕ್ಟರಿಂಗ್, ಬಿಲ್‌ಫೋರ್ಜ್‌ ಕಂಪನಿಗಳು ಭಾಗವಹಿಸಲಿವೆ. ಹೋಮಡಾ, ಶ್ನೈಡರ್, ಟ‍ಫೆ, ಯಜಾಕಿ, ಗಲ್ಫ್‌ನ ಮಲ್ಟಿನ್ಯಾಷನಲ್‌ ಕಂಪನಿಗಳು, ಅಮೆಜಾನ್, ರಾಯಿರ‍್ಸ್, ಒರ‍್ಯಾಕಲ್, ಎಂಫಸಿಸ್‌, ಯೆಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್‌, ಎಚ್‌ಡಿಎಫ್‌ಸಿ, ಜೆಕೆ ಟೈರ‍್ಸ್, ಸುಗಮ್ ಎಲಿವೇಟರ‍್ಸ್ ಮುಂತಾದ ಕಂಪನಿ ಕೂಡಾ ಇರಲಿವೆ’ ಎಂದು ಮೋಹನ್ ಆಳ್ವ ಮಾಹಿತಿ ನೀಡಿದರು.

‘ಕಳೆದ ಬಾರಿ 183 ಕಂಪನಿಗಳು ಭಾಗವಹಿಸಿದ್ದು, ಸುಮಾರು 20 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ 20 ಸಾವಿರ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ. ಮಾಹಿತಿಗಾಗಿ 9663190590, 9008907716, 7411157650 ಸಂಖ್ಯೆಗೆ ಸಂಪರ್ಕಿಸಬಹುದು’ ಎಂದರು.‌

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಸಂಸ್ಥೆಯ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಪದ್ಮನಾಭ ಶೆಣೈ, ಮಾಧ್ಯಮ ಸಂಯೋಜಕ ಪ್ರಸಾದ್‌ ಶೆಟ್ಟಿ ಇದ್ದರು.