ದಿನೇಶ್ ಗುಂಡೂರಾವ್ ಕುಟುಂಬಸ್ಥರಿಗೆ ಅವಮಾನಿಸಿದ ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳಿ – ವೆರೋನಿಕಾ ಕರ್ನೇಲಿಯೋ

Spread the love

ದಿನೇಶ್ ಗುಂಡೂರಾವ್ ಕುಟುಂಬಸ್ಥರಿಗೆ ಅವಮಾನಿಸಿದ ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳಿ – ವೆರೋನಿಕಾ ಕರ್ನೇಲಿಯೋ

ಉಡುಪಿ: ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂಬ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಅವರು ಹಾಗೂ ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

‘ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್ನಲ್ಲಿ ಬಿಜೆಪಿ ಕಾರ್ಯಕರ್ತ ವಿಚಾರಣೆ ನಡೆಸಿದ್ದ ಎನ್ಐಎ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾನಾಡುವಾಗ ದಿನೇಶ್ ಗುಂಡೂರಾವ್ ಕುಟುಂಬದ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ಸಚಿವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎನ್ನುವ ಮೂಲಕ ಇವರ ರಾಜಕೀಯ ತೆವಲಿಗೆ ಕುಟುಂಬವನ್ನು ಎಳೆದು ತರುವುದು ಇವರಿಗೆ ಶೋಭೆ ತರುವುದೇ?

ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರು ತಮ್ಮ ಟ್ರಸ್ಟ್ ಮೂಲಕ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇಧಭಾವವಿಲ್ಲದೆ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಎಂದೂ ಕೂಡ ರಾಜಕೀಯ ವಿಚಾರಗಳಲ್ಲಿ ತಲೆ ಹಾಕಿದ ಮಹಿಳೆಯಲ್ಲ ಎನ್ನುವ ಕನಿಷ್ಠ ಜ್ಞಾನ ಬಿಜೆಪಿ ಶಾಸಕರಿಗೆ ಇರಬೇಕಿತ್ತು. ಮಹಿಳೆಯರನ್ನು ಬಾಯಿಯಲ್ಲಿ ಮಾತ್ರ ಮಾತೆ ಎಂದು ಕರೆಯುವುದು ಬಿಟ್ಟರೆ ಆಕೆಗೆ ಯಾವ ರೀತಿಯ ಗೌರವ ನೀಡಬೇಕು ಎನ್ನುವ ಕನಿಷ್ಠ ಬುದ್ದಿ ಕೂಡ ಬಿಜೆಪಿಯವರಿಗೆ ಇಲ್ಲದಿರುವುದು ನಾಚೀಕೆಗೇಡಿನ ವಿಚಾರವಾಗಿದೆ.

ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಅವರದ್ದು ಒಂದು ರೀತಿಯ ಹರಕು ಬಾಯಿ ಎನ್ನುವುದು ಜಗತ್ತಿಗೆ ತಿಳಿದಿರುವ ವಿಚಾರವಾಗಿದೆ. ಚುನಾವಣೆ ಹೊತ್ತಲ್ಲಿ ಕೋಮು ಸೌಹಾರ್ದತೆ ಹಾಳು ಮಾಡಲು ಈ ರೀತಿ ಮಾತಾಡುತ್ತಿದ್ದಾರೆ. ದಿನೇಶ್ ಗುಂಡೂರಾವ್ ಕುಟುಂಬದ ವಿರುದ್ದ ನೀಡಿರುವ ಹೇಳಿಕೆ ದೇಶ ವಿರೋಧಿಯಾಗಿದ್ದು ಕೂಡಲೇ ಪೊಲೀಸ್ ಇಲಾಖೆ ಶಾಸಕ ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love