ದೇಶದ ಆರ್ಥಿಕತೆಯ ಸೊಂಟ ಮುರಿದದ್ದೇ ಮೋದಿಯವರ ಸಾಧನೆ: ಅರಫಾ ಮಂಚಿ

Spread the love

ದೇಶದ ಆರ್ಥಿಕತೆಯ ಸೊಂಟ ಮುರಿದದ್ದೇ ಮೋದಿಯವರ ಸಾಧನೆ: ಅರಫಾ ಮಂಚಿ

ಮಂಗಳೂರು: ಭ್ರಷ್ಟಾಚಾರ ಮುಕ್ತ, ಕಪ್ಪು ಹಣ, ಸ್ವಚ್ಛ ಭಾರತ ನಿರ್ಮಿಸುವ ಭರವಸೆ ನೀಡಿ, ದೇಶದ ಅಧಿಕಾರವನ್ನು ಹಿಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಯಾವುದೇ ಪೂರ್ವ ತಯಾರಿಲ್ಲದೆ 500, 1000 ರೂ. ನೋಟಿಗೆ ನಿಷೇಧ ಹೇರುವ ಮೂಲಕ ದೇಶದ ಆರ್ಥಿಕತೆಯ ಸೊಂಟವನ್ನು ಮುರಿದಿರುವುದೇ ಸಾಧನೆ ಎಂದು ಹಿರಿಯ ಪತ್ರಕರ್ತ ಅರಫಾ ಮಂಚಿ ಹೇಳಿದರು.

ನಗರದ ಮಿನಿ ವಿಧಾನಸೌಧದೆದುರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಘಟಕವು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.

akrosh-divas-welfare-party-protest

ಕಪ್ಪು ಹಣದ ಹೆಸರಿನಲ್ಲಿ ಬಡಜನರನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡಿರುವ ಸರಕಾರವು ಯಾವುದೇ ಪೂರ್ವ ತಯಾರಿಲ್ಲದೆ, ಉದ್ದೇಶಪೂರ್ವಕವಾಗಿ ಆರ್ಥಿಕ ತುರ್ತು ಪರಿಸ್ಥಿತಿ ಹೇರಿದ್ದು, ಅನಕ್ಷರಸ್ಥರೇ ಹೆಚ್ಚಿರುವ ನಮ್ಮ ದೇಶದ ಬಡವರು ಇಂದು ಕಪ್ಪು ಹಣ ಹೊಂದಿದ್ದಾರೆ ಎನ್ನುವ ಮೂಲಕ ಅಪಹಾಸ್ಯ ಮಾಡಿದ್ದಾರೆ. ಬ್ಯಾಂಕಿನಲ್ಲಿಂದು ಕ್ಯೂನಿಲ್ಲುವವರ ಪೈಕಿ ಯಾವುದೇ ಶ್ರೀಮಂತರು ಕಾಣುತ್ತಿಲ್ಲ. ಕಪ್ಪು ಹಣದ ಹೆಸರಿನಲ್ಲಿ ತಾವು ಹಾಕಿರುವ ಕಪ್ಪು ಕನ್ನಡಕವನ್ನು ತೆಗೆದು ವಾಸ್ತವ ಸಂಗತಿಯನ್ನು ನೋಡಿ ಎಂದು ಪ್ರಧಾನಿಯವರಿಗೆ ಕಿವಿಮಾತು ಹೇಳಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಬ್ಲ್ಯುಪಿಐ ಕರ್ನಾಟಕ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ಪ್ರಧಾನಿ ನರೇಂದ್ರ ಮೋದಿಯವರು ಇಂದು ಸೀರಾ ಬಾತ್, ಖಾರ ಬಾತ್, ಕೇಸರಿ ಬಾತ್ ನ ಹಾಗೆ ಮನ್ ಕಿ ಬಾತ್ ಅನ್ನು ಹೇಳುತ್ತಿದ್ದಾರೆ. ಆದರೆ ಜನಸಾಮಾನ್ಯರ ಮನ್ ಕಿ ಬಾತ್ ಅನ್ನು ಆಲಿಸುವ ಸಮಯವಿಲ್ಲ. ಸರಕಾರ ತೆಗೆದುಕೊಂಡಿರುವ ಈ ಕ್ರಮದಿಂದ ಕಪ್ಪು ಹಣ ಹೊಂದಿರುವ ಮಂದಿಗೆ ತೊಂದರೆಯಾಗುವ ಬದಲಾಗಿ ಜನಸಾಮಾನ್ಯರಿಗಾದ ತೊಂದರೆ ಕಾಣದಿರುವುದು ವಿಷಾದನೀಯ ಎಂದು ಹೇಳಿದರು.

ಬಳಿಕ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ನೂರುಲ್ ಅಮೀನ್ ಪಕ್ಕಲಡ್ಕ, ಭಾರತದಂತಹಾ ದೊಡ್ಡ ಆರ್ಥಿಕ ವ್ಯವಸ್ಥೆಯಲ್ಲಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳುವಾಗ ಜನಾಭಿಪ್ರಾಯ ಸಂಗ್ರವಾಗಬೇಕಿತ್ತು. ಅದನ್ನು ಮಾಡದೆ ಅನಕ್ಷರಸ್ಥರಿರುವ ದೇಶದಲ್ಲಿ ಮೊಬೈಲ್ ಆಪ್ ಮೂಲಕ ಜನಾಭಿಪ್ರಾಯ ತೆಗೆಯುವ ಮೂಲಕ ಮೂರ್ಖ ತೀರ್ಮಾನ ಮಾಡಿದೆ ಎಂದು ಹೇಳಿದ ಅವರು, ತಾಯಿಯನ್ನೇ ತನ್ನ ರಾಜಕೀಯದ ವಸ್ತುವಾಗಿ ಬಳಸಿದ ಪ್ರಧಾನಿ ಇದ್ದರೆ ಅದು ಮೋದಿಯವರು ಮಾತ್ರ ಎಂದು ಬೇಸರ ವ್ಯಕ್ತಪಡಿಸಿದರು.

ಸರಕಾರದ ನಿರ್ಧಾರವು ಅಡಾಲ್ಫ್ ಹಿಟ್ಲರ್ ನ ಸರ್ವಾಧಿಕಾರದ ಧೋರಣೆಯನ್ನು ತೋರಿಸುತ್ತಿದೆ ಎಂದು ಹೇಳಿದ ವೆಲ್ಫೇರ್ ಪಾರ್ಟಿ ರಾಜ್ಯ ಕಾರ್ಯದರ್ಶಿ ಅನ್ವರ್ ಅಲಿ ಕಾಪು, ಜನ ಸಾಮಾನ್ಯರು ಹಣ ಪಡೆಯುವ ಹಕ್ಕು ಅಬಾಧಿತವಾಗಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಝಾಹಿದ್ ಹುಸೇನ್ ಮಾತನಾಡಿದರು. ಈ ಸಂದರ್ಭ ವೆಲ್ಫೇರ್ ಪಾರ್ಟಿಯ ಯೂಸುಫ್ ಪಕ್ಕಲಡ್ಕ, ಮೋನಾಕ ಬೆಂಗ್ರೆ,ಎಸ್ ಎಂ. ಮುತ್ತಲಿಬ್, ಅಬ್ದುಸ್ಸಲಾಂ ಸಿ,ಎಚ್, ಸುಲೈಮಾನ್ ಕಲ್ಲರ್ಪೆ, ಯೂತ್ ಮೂಮೆಂಟ್ ನ ಶಾಕೀರ್ ಅಹ್ಮದ್, ನಿಸಾರ್, ಇಫ್ತಿಕಾರ್ ತೊಕ್ಕೊಟ್ಟು, ಸರ್ಫರಾಝ್, ಮನಸೂರ್ ಸಿ.ಎಚ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Spread the love