ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆ 59, ಮರಳುಗಾರಿಕೆಗೆ 42 ಪರವಾನಿಗೆ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

Spread the love

ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆ 59, ಮರಳುಗಾರಿಕೆಗೆ 42 ಪರವಾನಿಗೆ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳುಗಾರಿಕೆ ಸಮಸ್ಯೆ ಬಹುತೇಕ ಪರಿಹಾರಗೊಂಡಿದೆ. ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಈಗಾಗಲೇ 59 ಪರವಾನಿಗೆ ನೀಡಲಾಗಿದೆ. 42 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಸಲು ಮಾರ್ಚ್ ಒಳಗೆ ಪರವಾನಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಈಗಾಗಲೇ 19 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಇನ್ನೂ 42 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಇದರಿಂದಾಗಿ ಮುಂದಿನ ಐದು ವರ್ಷ ಮರಳುಗಾರಿಕೆಗೆ ಸಮಸ್ಯೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಈ ಹಿಂದೆ 30-35 ರೂ.ಗೆ ದೊರೆಯುತ್ತಿದ್ದ ಕೆಂಪುಕಲ್ಲು ಬಳಿಕ 65 ರೂ.ಗೆ ಏರಿಕೆಯಾಗಿತ್ತು. ಈ ಸಮಸ್ಯೆ ಬಗೆಹರಿಸಿ, ಕೆಂಪು ಕಲ್ಲು ತೆಗೆಯಲು ಇದುವರೆಗೆ 59 ಪರ್ಮಿಟ್‌ಗಳನ್ನು ನೀಡಲಾಗಿದೆ. ಇನ್ನೂ 12 ಅರ್ಜಿಗಳು ಬಾಕಿ ಉಳಿದಿದ್ದು, ಶೀಘ್ರ ವಿಲೇವಾರಿ ಮಾಡಲಾಗುವುದು. ಸದ್ಯ ಕಲ್ಲಿನ ದರ 45 ರೂ.ಗೆ ಇಳಿಕೆಯಾಗಿದೆ. ಮುಂದೆ ಇದನ್ನು 40 ರೂ.ಗಿಂತ ಕೆಳಗೆ ಇಳಿಸುವ ಉದ್ದೇಶ ಇದೆ ಎಂದರು.

ಕೆಂಪುಕಲ್ಲು ತೆಗೆಯಲು ಅರ್ಜಿ ಆಹ್ವಾನಿಸಲಾಗಿದ್ದು, 60 ಅರ್ಜಿಗಳು ಮಾತ್ರ ಬಂದಿದೆ. ಆಸಕ್ತರು ಅರ್ಜಿ ಹಾಕಿದರೆ ಪರ್ಮಿಟ್ ನೀಡಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ರಸ್ತೆ ಗುಂಡಿ ಮುಚ್ಚಲು ಕ್ರಮ: ಜಿಲ್ಲೆಯ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ರಸ್ತೆಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಏಳು ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಗರ ಹೊರವಲಯದ ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದರೂ ವಾರದಲ್ಲೊಂದು ದಿನ ತಾನು ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಜಿಲ್ಲಾಧಿಕಾರಿ ದರ್ಶನ್ ಹೇಳಿದರು.

ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್‌ಎಎಫ್ ಪಡೆ ಕಚೇರಿಗೆ ಸ್ಥಳಾವಕಾಶ ನೀಡಲಾಗಿದೆ. ಉಳಿದಂತೆ ರಾಷ್ಟ್ರೀಯ ಹೆದ್ದಾರಿ, ಕಾರ್ಮಿಕ ಇಲಾಖೆಗೆ ಸ್ಥಳಾವಕಾಶ ನೀಡುವ ನಿಟ್ಟಿನಲ್ಲಿ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.


Spread the love
Subscribe
Notify of

0 Comments
Inline Feedbacks
View all comments