ಪಡುಬಿದ್ರೆ ಮೊಬೈಲ್ ಮತ್ತು ಚಿನ್ನದ ಅಂಗಡಿ ಕಳ್ಳತನ ನಡೆಸಿದ ಆರೋಪಿಗಳ ಬಂಧನ

ಪಡುಬಿದ್ರೆ ಮೊಬೈಲ್ ಮತ್ತು ಚಿನ್ನದ ಅಂಗಡಿ ಕಳ್ಳತನ ನಡೆಸಿದ ಆರೋಪಿಗಳ ಬಂಧನ

ಪಡುಬಿದ್ರಿ: ಕಳೆದ ಸೆಪ್ಟೆಂಬರ್ 2 ರಂದು ಪಡುಬಿದ್ರಿ ಕೆಳಗಿನ ಪೇಟೆಯಲ್ಲಿರುವ ಬ್ಯಾಂಕ್‍ನ ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಸಮೀಪದಲ್ಲಿದ್ದ ಚಿನ್ನದ ಅಂಗಡಿ ಹಾಗೂ ಮೊಬೈಲ್ ಅಂಗಡಿಗೆ ನುಗ್ಗಿ ಲಕ್ಷಾಂತರ ರೂ. ಮೊಬೈಲ್ ಕಳವು ಮಾಡಿದ 5 ಜನ ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಮಹಾರಾಷ್ಟ್ರದಲ್ಲಿ ಭಾನುವಾರ ಬಂಧಿಸಿದ್ದಾರೆ.

ಸುಭಾಷ್ ಭೀಮರಾವ್ ಕಾಳೆ (26), ಶಂಕರ್ ಲಗಮನ್ ಕಾಳೆ (37), ಸುಭಾಷ್ ಭಾಸ್ಕರ ಕಾಳೆ (27), ಕಾಳಿದಾಸ ಭಾಸ್ಕರ ಕಾಳೆ (31), ಸುನೀಲ ನಾನಾ ಕಾಳೆ (27) ಬಂಧಿತರು.

ಬಂಧಿತರಿಂದ ಆರು ಮೊಬೈಲ್‍ಗಳು ಹಾಗೂ ಕೃತ್ಯಕ್ಕೆ ಬಳಸಿದ ಚೂರಿಯನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳೆಲ್ಲ ಮಹಾರಾಷ್ಟ್ರದ ಉಸ್ಮನಾಬಾದ್ ಜಿಲ್ಲೆಯ ಕಲಾಂಬ್ ತಾಲೂಕಿನವರಾಗಿದ್ದು, ಮಹಾರಾಷ್ಟ್ರದಿಂದ ಎರಡು ಲಾರಿಗಳಲ್ಲಿ ಸರಕು ಹೇರಿಕೊಂಡು ಬಂದು ಮಂಗಳೂರಿಗೆ ತಲುಪಿಸಿ ಹಿಂದಿರುಗುವ ವೇಳೆ ಈ ಕೃತ್ಯವೆಸಗಿದ್ದಾರೆ. ಆರೋಪಿಗಳಲ್ಲಿ ಶಂಕರ್ ಲಗಮನ್ ಕಾಳೆ ವಿರುದ್ಧ ಬೆಳಗಾವಿ ಜಿಲ್ಲೆಯ ಬಸವೇಶ್ವರ ಚೌಕಿ ಹಾಗೂ ಹುಬ್ಬಳ್ಳಿ ಠಾಣೆಗಳಲ್ಲಿ ಕಳವು ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳು ಮಹಾರಾಷ್ಟ್ರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್, ಪಡುಬಿದ್ರಿ ಎಸ್‍ಐ ಸತೀಶ್, ಸಿಬ್ಬಂದಿ ಸುಧಾಕರ್, ರಾಜೇಶ್, ಪ್ರವೀಣ್‍ಕುಮಾರ್ ಸಂಧೀಪ್, ಪ್ರಕಾಶ್ ಅವರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.