ಪಡುಬಿದ್ರೆ: ರಸ್ತೆ ಅಪಘಾತದಲ್ಲಿ ಗೌಜಿ ಇವೆಂಟ್ಸ್ ಮಾಲಕ ಅಭಿಷೇಕ್ ಮೃತ್ಯು
ಉಡುಪಿ: ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಯುವ ಉದ್ಯಮಿಯೋರ್ವರು ಮೃತಟಪಟ್ಟ ಘಟನೆ ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಅಭಿಷೇಕ್ ಯಾನೆ ಅಭಿ (32) ಎಂದು ಗುರುತಿಸಲಾಗಿದೆ. ಅವರು ಮಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯನ್ನು ನಡೆಸುತ್ತಿದ್ದರು.
ಬುಧವಾರ ನಸುಕಿನ ಜಾವ 2.20 ರ ಸಮಾರಿಗೆ ಕಾಪುವಿನಲ್ಲಿ ಕಾರ್ಯಕ್ರಮ ಮುಗಿಸಿ ವಾಪಾಸು ತೆರಳುತ್ತಿದ್ದ ವೇಳೆ ಅವರ ಕಾರು ಎರ್ಮಾಳು ತೆಂಕ ಸೇತುವೆ ಬಳಿ ತಿರುವಿನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಅವರನ್ನು ತಕ್ಷಣವೇ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದರು ತುರ್ತು ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರನ್ನು ಅವರೇ ಚಲಾಯಿಸುತ್ತಿದ್ದು, ಸಹಪ್ರಯಾಣಿಕರು ಯಾರೂ ಇರಲಿಲ್ಲ. ಹಿಂದಿನ ವಾಹನಗಳಲ್ಲಿ ಅವರ ಗೆಳೆಯರು ಇದ್ದರು ಎಂದು ತಿಳಿದು ಬಂದಿದೆ.
ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಧರಾಶಾಯಿಯಾಗಿ, ಕಾರು ನಜ್ಜುಗುಜ್ಜಾಗಿದೆ. ಈ ಸಂದರ್ಭ ವಿದ್ಯುತ್ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.
ಮೃತ ಅಭಿಷೇಕ್ ಅವರು ಪಂಪ್ ವೆಲ್ ಗೌಜಿ ಇವೆಂಟ್ಸ್ ಮ್ಹಾಲಕರಾಗಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದರು.
ಘಟನೆ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













