ಪಣಂಬೂರು: ಸುಲಿಗೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ  

Spread the love

ಪಣಂಬೂರು: ಸುಲಿಗೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ  

ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಳವು ಸೊತ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.

ದಿನಾಂಕ 13.04.2026ರಂದು ಮಡಿಕೇರಿ ಸೋಮವಾರಪೇಟೆ ನಿವಾಸಿ ಅಜಯ್ ಕೆ.(29) ಅವರು ಸ್ನೇಹಿತರಾದ ರಮೇಶ್ ಹಾಗೂ ರಫೀಕ್ ಜೊತೆ ತಣ್ಣೀರುಬಾವಿ ಬೀಚ್‌ಗೆ ಹುಟ್ಟುಹಬ್ಬ ಆಚರಿಸಲು ತೆರಳಿದ್ದ ವೇಳೆ ಮುಂಜಾನೆ 2.30ರ ಸುಮಾರಿಗೆ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆಗೆ ಹೋಗಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರಲ್ಲಿ ವಿಳಾಸ ವಿಚಾರಿಸಿದಾಗ, ಆರೋಪಿಗಳು ದಾರಿ ತೋರಿಸುವ ನೆಪದಲ್ಲಿ ಕಾರಿನೊಳಗೆ ಕುಳಿತು ಸ್ವಲ್ಪ ಮುಂದೆ ಹೋಗಿ ಕಾರು ನಿಲ್ಲಿಸಿ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿ ಸುಲಿಗೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳು ಪಿರ್ಯಾದಿದಾರರು ಮತ್ತು ಸ್ನೇಹಿತರಿಂದ ಸುಮಾರು 24,500 ರೂ. ಮೌಲ್ಯದ ವಾಚ್‌ಗಳು, ನಗದು, ಗಿಂಬಲ್, ಪವರ್ ಬ್ಯಾಂಕ್, ಬ್ರಾಸ್ಲೆಟ್ ಸೇರಿದಂತೆ ವಿವಿಧ ವಸ್ತುಗಳನ್ನು ಕಿತ್ತುಕೊಂಡಿದ್ದು, ಕಾರಿನ ಗ್ಲಾಸ್‌ಗೆ ಹಾನಿ ಮಾಡಿ ಒಟ್ಟು 32,500 ರೂ. ನಷ್ಟ ಉಂಟುಮಾಡಿರುವುದಾಗಿ ಹೇಳಲಾಗಿದೆ.

ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.49/2026 ಕಲಂ 309(4), 324(1) ಬಿಎನ್‌ಎಸ್-2023 ಹಾಗೂ ಕೆಪಿಡಿಎಲ್‌ಪಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಶ್ರೀಕಲಾ ಕೆ.ಟಿ., ಜ್ಞಾನಶೇಖರ್ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ಮೊಹಮ್ಮದ್ ಸಿನಾನ್ (24) ಮತ್ತು ಝಹೀರ್ ನಿಸಾರ್ (22), ಇಬ್ಬರೂ ಕಸಬಾ ಬೆಂಗ್ರೆ ನಿವಾಸಿಗಳನ್ನು ಬಂಧಿಸಿ, ಸುಲಿಗೆ ಮಾಡಿದ್ದ ಗಿಂಬಲ್, ಟೈಟಾನ್ ವಾಚ್ ಹಾಗೂ ಕೃತ್ಯಕ್ಕೆ ಬಳಸಿದ ಸ್ಕ್ರೂಡ್ರೈವರ್ ವಶಪಡಿಸಿಕೊಂಡಿದ್ದರು.

ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಚಂದು ಹಾರೀಸ್ (33)ನನ್ನು ಏಪ್ರಿಲ್ 22ರಂದು ಬಂಧಿಸಿ, ಆತನಿಂದ ಉಳಿದ ಸೊತ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್ ಅಪಾಚೆ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಚಂದು ಹಾರೀಸ್ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪಣಂಬೂರು ಠಾಣೆಯಲ್ಲಿ ರೌಡಿ ಪಟ್ಟಿಯೂ ತೆರೆಯಲಾಗಿದೆ. ಈತನ ವಿರುದ್ಧ ಹಿಂದಿನ ಪ್ರಕರಣಗಳಲ್ಲಿ ಮೂರು ವಾರೆಂಟ್‌ಗಳು ಬಾಕಿ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments