ಪಾಕಿಸ್ತಾನ ಝಿಂದಾಬಾದ್ ಘೋಷಣೆ: ಆರೋಪಿ ಸೃಜನ್ ಪೂಜಾರಿ ಬಂಧನ

Spread the love

ಪಾಕಿಸ್ತಾನ ಝಿಂದಾಬಾದ್ ಘೋಷಣೆ: ಆರೋಪಿ ಸೃಜನ್ ಪೂಜಾರಿ ಬಂಧನ

ಉಡುಪಿ: ‘ಪಾಕಿಸ್ತಾನ ಝಿಂದಾಬಾದ್’ ಎಂದು ಘೋಷಣೆ ಕೂಗಿ ಮಲ್ಪೆ ಬೀಚ್‌ನಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆಯೊಡ್ಡಿರುವ ವೀಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಮಲ್ಪೆ ತೊಟ್ಟಂ ಬಾಜಲ್ ಬಾರ್ ಬಳಿಯ ನಿವಾಸಿ ಶೇಖರ್ ಎಂಬವರ ಪುತ್ರ ಸೃಜನ್ ಪೂಜಾರಿ(18) ಬಂಧಿತ ಆರೋಪಿ. ಈತ ನಿನ್ನೆ ಅರ್ಧ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹಿಂದಿಯಲ್ಲಿ ಮಾತನಾಡುತ್ತಾ, ‘ಪಾಕಿಸ್ತಾನ ಜಿಂದಾಬಾದ್’ ನಮ್ಮ ಮುಂದಿನ ಗುರಿ ಮಲ್ಪೆ ಬೀಚ್. ಅಲ್ಲಿ ಬಹಳ ದೊಡ್ಡ ಮಟ್ಟದ ಬಾಂಬ್ ಸ್ಫೋಟ ಮಾಡುತ್ತೇವೆ ಎಂದು ವೀಡಿಯೋದಲ್ಲಿ ತಯಾರಿಸಿದ್ದನು. ಈ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ಇಂದು ಬೆಳಗ್ಗೆ ಸಚಿನ್ ಎಂಬವರು ಮಲ್ಪೆ ಠಾಣೆಗೆ ಬಂದು ಪೊಲೀಸರಿಗೆ ವೀಡಿಯೋ ಮಾಹಿತಿ ನೀಡಿದ್ದು, ಅದರಲ್ಲಿ ಆರೋಪಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆಯನ್ನು ಕೂಗುತ್ತ ಮಲ್ಪೆ ಬೀಚ್‌ನಲ್ಲಿ ಬಾಂಬ್ ಹಾಕಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವುದು ಕಂಡುಬಂದಿತ್ತು. ಈ ವೀಡಿಯೊ ತುಣುಕನ್ನು ಆಧರಿಸಿ ಮಲ್ಪೆ ಠಾಣಾಧಿಕಾರಿ ಮಧು ಆರೋಪಿಯ ವಿರುದ್ಧ ಕಲಂ 153(ಎ), 505(2) ಐಪಿಪಿಯಂತೆ ಪ್ರಕರಣ ದಾಖಲಿಸಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದರು. ಉಡುಪಿ ಮಹಿಳಾ ಠಾಣೆಯ ನಿರೀಕ್ಷಕ ಸಂಪತ್ ಕುಮಾರ್, ಮಲ್ಪೆ ಠಾಣಾಧಿಕಾರಿ ಮಧು ಹಾಗೂ ಸಿಬ್ಬಂದಿ ತನಿಖೆ ಕೈಗೆತ್ತಿಕೊಂಡು ಆರೋಪಿಯ ಶೋಧ ಕಾರ್ಯ ಆರಂಭಿಸಿದರು.

ಸೃಜನ್‌ನನ್ನು ಮನೆಯಲ್ಲಿ ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಆಗ ಆತ ತಾನೇ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡನು. ಕೂಡಲೇ ಆತನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.


Spread the love