ಪುರಾಣ ಕಥನ ಕಟ್ಟಿಕೊಟ್ಟ ಕು.ಸುಷ್ಮಿತಾ ನೃತ್ಯವೈಖರಿ

Spread the love

ಪುರಾಣ ಕಥನ ಕಟ್ಟಿಕೊಟ್ಟ ಕು.ಸುಷ್ಮಿತಾ ನೃತ್ಯವೈಖರಿ

ನೃತ್ಯವೊಂದು ಕಥೆಯೊಂದರ ವಿವಿಧ ಎಳೆಗಳನ್ನು ವಿನೂತನವಾಗಿ ಕಟ್ಟಿಕೊಡುತ್ತದೆ. ಪುರಾಣ, ಇತಿಹಾಸದ ವಿವರಗಳನ್ನು ಪ್ರಸ್ತುತಪಡಿಸುತ್ತದೆ. ತನ್ನ ಹಿಂದಿನ ಹಿರಿಮೆ-ಗರಿಮೆಗೆ ತಕ್ಕಂತೆಯೇ ವರ್ತಮಾನದಲ್ಲಿ ಒಪ್ಪಿತವಾಗುತ್ತದೆ. ಇದನ್ನು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಲಕ್ಷದೀಪೋತ್ಸವ ಪ್ರಯುಕ್ತ ವಸ್ತುಪ್ರದರ್ಶನ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರೂಪಿಸಿದವರು ಕು.ಸುಷ್ಮಿತಾ. ತಮ್ಮ ಭರತನಾಟ್ಯದ ಮೂಲಕ ಪೌರಾಣಿಕ ಕಥನಗಳನ್ನು ಬಿಂಬಿಸಿದರು.

ಅವರ ನೃತ್ಯವೈಖರಿ ಕಲಾವಲಯದ ಹಿರಿಮೆಯನ್ನು ಹೆಚ್ಚಿಸುವ ರೀತಿಯಲ್ಲಿತ್ತು. ಪುರಾಣ ಪ್ರಸಂಗಗಳನ್ನು ವರ್ತಮಾನದ ಪ್ರೇಕ್ಷಕರ ಗ್ರಹಿಕೆಗೆ ಎಟುಕುವಂತೆ ಅವರು ಕಟ್ಟಿಕೊಟ್ಟರು.

sushmitha-bharatanatya-1

ಪುಷ್ಪಾಂಜಲಿಯಿಂದ ಪ್ರಾರಂಭವಾದ ಭರತನಾಟ್ಯದ ರಸದೌತಣ ಗಣೇಶನ ಸ್ತುತಿ, ಶಿವಸ್ತುತಿ, ಕೃಷ್ಣ ಸ್ತುತಿಯಿಂದ ಮುಂದುವರಿದು ತಿಲ್ಲಾನದಲ್ಲಿ ಸಮಾರೋಪಗೊಂಡಿತು. ಕು.ಸುಶ್ಮಿತಾರ ನೃತ್ಯ ಪ್ರದರ್ಶನ ಅವಿಸ್ಮರಣೀಯವಾಗಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯಿತು. ಶಿವ ಪುರಾಣ, ಆದಿಶಕ್ತಿಯ ಮಹಿಷ ಮರ್ದಿನಿ ಅವತಾರ, ಸೃಷ್ಟಿಯ ಪಾಲನೆ, ಕೃಷ್ಣ ಲೀಲೆಯ ಪ್ರಸ್ತುತಿ ಸೊಗಸಾಗಿ ಮೂಡಿಬಂದಿತು.

ಆದಿ ಅಧಿನಾಯಕನಾದ ಗಣೇಶನನ್ನು ಅಠಾಣ ರಾಗಸಂಯೋಜನೆಯ ‘ಶ್ರೀ ಮಹಾಗಣಪತಿ’ ಹಾಡಿನ ಮೂಲಕ ಸ್ತುತಿಸಲಾಯಿತು. ತಾಳಗಳಿಗೆ ತಕ್ಕಂತೆ ಭಾವಪೂರ್ಣ ಮುದ್ರೆಗಳೊಂದಿಗೆ ಸಾದರಪಡಿಸಿದ ನೃತ್ಯ ಮನಮೋಹಕವಾಗಿತ್ತು.

ಸೃಷ್ಟಿಗೆ ಕಾರಣೀಭೂತಳಾದ ಆದಿಶಕ್ತಿಯ ಮಹಾತ್ಮೆಯ ಕುರಿತಾದ ನೃತ್ಯವು ‘ಐಗಿರಿ ನಂದಿನಿ’ ಹಾಡಿನ ಮೂಲಕ ಸೊಗಾಸಾಗಿ ಮೂಡಿಬಂತು. ಈ ನೃತ್ಯ ಹಲವರನ್ನು ಸೆಳೆಯಿತು. ಈ ಹಾಡಿನಲ್ಲಿ ಪ್ರಸ್ತುತವಾದ ರೌದ್ರ, ಶಾಂತ ರಸಗಳನ್ನು ಅಭಿನಯದ ಮೂಲಕ ಸುಷ್ಮಿತಾ ನಿರ್ವಹಿಸಿದರು.
ಮಂಗಳ ಸ್ವರೂಪನಾದ ನೃತ್ಯಶಾಸ್ತ್ರಕ್ಕೆ ಅಧಿದೇವತೆಯಾಗಿರುವ ಶಿವಸ್ತುತಿಯ ಮೂಲಕ ಆರಂಭವಾದ ಶಿವ ಪುರಾಣದ ಪ್ರಸ್ತುತಿ ಭಿನ್ನವಾಗಿತ್ತು. ರೇವತಿ ರಾಗದ ‘ಮಹಾದೇವ ಶಿವ ಶಂಭೋ’ ಎಂಬ ಹಾಡಿನೊಂದಿಗೆ ಜನಮನ ಸೆಳೆಯಿತು.

ಯಮನ ಕೈಯಿಂದ ಸಾವಿನದವಡೆಯಿಂದ ಪಾರಾಗಿ ಬಂದ ಶಿವಭಕ್ತ ಮಾರ್ಕಂಡೇಯ, ಗಂಗಾವತರಣದ ಕಥೆಗಳು ಅವರ ನೃತ್ಯದ ಮೂಲಕ ನಿರೂಪಿತವಾದವು.

ವರದಿ: ವಿನಿಷ ಉಜಿರೆ, ಚಿತ್ರಗಳು: ಚೈತನ್ಯ ಕುಡಿನಲ್ಲಿ


Spread the love