ಕಂಬಳ ನಿಷೇಧ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಖಂಡನೆ

Spread the love

ಕಂಬಳ ನಿಷೇಧ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಖಂಡನೆ

ಮಂಗಳೂರು: ಸಮಗ್ರ ತುಳುನಾಡಿನ ಸಾಂಪ್ರದಾಯಿಕ ಆಚರಣೆ, ಜಾನಪದ ಕ್ರೀಡೆ ಕಂಬಳಕ್ಕೆ ನಿಬರ್ಂಧ ವಿಧಿಸಿರುವ ಕ್ರಮ ಸರಿಯಲ್ಲ ಖಂಡನೀಯ ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪುರವರು ತಿಳಿಸಿದರು.

tulunadu-rakshana-vedike-pressmeet tulunadu-rakshana-vedike-pressmeet-1

ಶನಿವಾರದಂದು ಮಂಗಳೂರು ಪತ್ರಿಕಾ ಭವನದಲ್ಲಿ ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಿಷೇಧದ ಬಗ್ಗೆ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ. ಕಂಬಳ ನಿಷೇಧ ಕುರಿತಂತೆ ಪೀಪಲ್ ಫಾರ್ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಕ್ರೀಡೆಗೆ ಮಧ್ಯಂತರ ತಡೆ ನೀಡಿರುವುದು ತುಳುನಾಡಿನ ಜನತೆಯ ಆತ್ಮಾಭಿಮಾನವನ್ನು ಪ್ರಶ್ನಿಸಿದಂತಾಗಿದೆ. ಇಲ್ಲಿನ ಜನರ ಸಂಸ್ಕøತಿಯ ಒಂದು ಭಾಗವೇ ಆಗಿರುವ ಈ ಜಾನಪದ ಆಚರಣೆಗೆ ಸುಮಾರು 800 ವರ್ಷಗಳ ಇತಿಹಾಸವಿದ್ದು, ಕಂಬಳಕ್ಕೂ ಕೃಷಿಕರಿಗೂ ಬಿಟ್ಟಿರಲಾರದ ನಂಟಿದೆ. ಇದರ ನಿಷೇಧವೆಂದರೆ ಈಗಾಗಲೇ ನಶಿಸುತ್ತಿರುವ ಕೃಷಿ ಬದುಕು ಮತ್ತಷ್ಟು ಅವನತಿಗೆ ಸಾಗಿದಂತಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆ ಸೇರಿದಂತೆ ಇಲ್ಲಿ ಸುಮಾರು 25ಕ್ಕೂ ಹೆಚ್ಚ್ಚು ಕಂಬಳ ಕೂಟಗಳಿಗೆ ದಿನ ನಿಗದಿಯಾಗಿತ್ತು. ಇದೀಗ ಏಕಾಏಕಿ ನಿಷೇಧದಿಂದ ಕಂಬಳ ಪ್ರಿಯರಿಗೆ ಆಘಾತವಾದಂತಾಗಿದೆ.

ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ವಿತಂಡವಾದ ಒಪ್ಪುವಂಥದ್ದಲ್ಲ. ಹಿಂಸೆ ಎನ್ನುವ ಪ್ರಾಣಿದಯಾ ಸಂಘದವರಿಗೆ ಎತ್ತು, ಕೋಣ ಇತರ ಜಾನುವಾರುಗಳ ಬಗ್ಗೆ, ಅವುಗಳ ದೇಹರಚನೆ ಬಗ್ಗೆ ಸಮರ್ಪಕ ಮಾಹಿತಿಯೇ ಇಲ್ಲ. ಪ್ರಸ್ತುತ ಜಲ್ಲಿಕಟ್ಟು, ಎತ್ತಿನಗಾಡಿ ಓಟ ಹಾಗೂ ಗ್ರಾಮೀಣ ಕ್ರೀಡೆಯಾದ ಕಂಬಳ ಒಂದೇ ನಿಯಮದಡಿ ಇವೆ. ಜಲ್ಲಿಕಟ್ಟು, ಎತ್ತಿನಗಾಡಿ ಓಟದಲ್ಲಿ ಸಾಕಷ್ಟು ಹಿಂಸೆ ನೀಡಲಾಗುತ್ತಿದೆ. ಪ್ರಾಣಾಪಾಯ ಸಂಭವಿಸಿದ ಉದಾಹರಣೆಗಳೂ ಇವೆ. ಕೋಣಗಳಿಗೆ ಹೊಡೆಯುವುದು ಹಿಂಸೆಯಾದರೆ ಹೆಚ್ಚಿನ ಕಡೆ ಒಂಟೆ, ಕುದುರೆ, ಆನೆಗಳು ಇದಕ್ಕಿಂತ ಹೆಚ್ಚಿನ ಹಿಂಸೆ ಅನುಭವಿಸುತ್ತಿವೆ. ಆಹಾರಕ್ಕಾಗಿ ವಿವಿಧ ಪ್ರಾಣಿಗಳನ್ನು ಸಂಹರಿಸುತ್ತಿರುವುದು ಹಿಂಸೆಯಲ್ಲವೆ ? ಗದ್ದೆ ಉಳುಮೆಯ ಸಂದರ್ಭದಲ್ಲಿ ಎತ್ತು, ಕೋಣಗಳಿಗೆ ಸಹಜವಾಗಿ ಬೆತ್ತದಿಂದ ಪೆಟ್ಟು ಕೊಡುವ ಕ್ರಮವಿದೆ. ಇದನ್ನು ಹಿಂಸೆ ಎನ್ನಲಾಗುತ್ತಿದೆಯೇ ? ಬೇಸಾಯದ ನಂಟು, ತುಳುನಾಡಿನ ಅರಸರ ಆಶ್ರಯ ದೈವ-ದೇವರುಗಳ ಸಂಬಂಧವೂ ಕಂಬಳಕ್ಕಿದೆ. ತುಳುನಾಡಿನಲ್ಲಿ ಕಂಬಳ ಎಂದರೆ ಬರೇ ಸ್ಪರ್ಧೆಯಲ್ಲ. ಅದು ನೆಲದ ಆರಾಧನೆ, ದೇವರ ಕಂಬಳ, ಪೂಕರೆ ಕಂಬಳಗಳಲ್ಲಿ ‘ಪನಿ’ ಕುಳಿತುಕೊಳ್ಳುವುದು, ಸೇಡಿ ಹಾಕುವುದು, ಮಾರಿ ಕಳೆಯುವುದು ಮೊದಲಾದ ಕ್ರಿಯೆಗಳು ಇಂದಿಗೂ ನಡೆದುಕೊಂಡು ಬಂದಿವೆ. ದೈವ-ದೇವರ ಮತ್ತು ಭೂಮಿತಾಯಿಯ ಆರಾಧನೆ ಇಲ್ಲಿ ಮುಖ್ಯವಾದವುಗಳು. ಈಗಲೂ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕೆಸರ್ದ ಪರ್ಬ, ಸಾಮೂಹಿಕ ನಾಟಿ, ಬೆಳೆಕೊಯ್ಯುವಂತಹ ಕಾರ್ಯಕ್ರಮಗಳಲ್ಲಿ ಜಾತಿ ಮತ್ತು ಧರ್ಮದ ಎಲ್ಲೆ ಮೀರಿ ಗ್ರಾಮಸ್ಥರು ಭಾಗವಹಿಸುತ್ತಿದ್ದಾರೆ. ಕೆಸರ ಕ್ರೀಡೆಯಿಂದಾಗಿ ಉತ್ತಮ ಫಸಲೂ ಲಭ್ಯವಾಗುತ್ತಿದೆ. ಇಂತಹ ಆಚರಣೆಗಳಿಂದ ನಶಿಸುತ್ತಿರುವ ಕೃಷಿ ಬದುಕು ಮತ್ತು ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳುತ್ತಿವೆ.

ಒಟ್ಟಿನಲ್ಲಿ ಪುರಾತನ ಸಾಂಪ್ರದಾಯಿಕ ಆಚರಣೆಯೊಂದು ಜಾನುವಾರು, ಕೃಷಿ ಬದುಕು, ದೈವಾರಾಧನೆ – ಇವುಗಳ ಬಗ್ಗೆ ಎಳ್ಳಷ್ಟೂ ಅರಿವಿಲ್ಲದ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತಿರುವವರ ಅರೆಪಕ್ವ ನಿರ್ಧಾರದಿಂದ ನಿಂತು ಹೋಗುವುದು ತುಳು ಸಂಸ್ಕøತಿಯ ದುರಂತವೆನಿಸಿಕೊಳ್ಳುತ್ತದೆ.

ಕಂಬಳಾಚರಣೆ ಉಳಿಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿಯ ನೇತೃತ್ವದಲ್ಲಿ ವಿವಿಧ ಹಂತದ ಹೋರಾಟ ನಡೆಸಲು ನಿರ್ಧರಿಸಲಾಗಿದ್ದು, ಈ ಎಲ್ಲಾ ಬಗೆಯ ಹೋರಾಟಗಳಿಗೆ ತುಳುನಾಡ ರಕ್ಷಣಾ ವೇದಿಕೆ ಜೊತೆಗಿದ್ದು ಬೆಂಬಲ ನೀಡುತ್ತದೆ ಅಲ್ಲದೆ ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದಲೂ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.


Spread the love