
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿಜಪ್ತಿಗೆ ಎನ್ಐಎ ಅಧಿಕಾರಿಗಳು ಸಜ್ಜು
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್ಐಎ ಇದೀಗ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಉಮರ್ ಫಾರೂಕ್ ಮತ್ತು ಮುಸ್ತಾಫಾ ಪೈಚಾರ್ ಅವರ ಆಸ್ತಿ ಜಪ್ತಿಗೆ ಮುಂದಾಗಿದೆ. ಆರೋಪಿಗಳು ಜೂನ್ 30ರಂದು ಶರಣಾಗದೇ ಇದ್ದಲ್ಲಿ ಆಸ್ತಿ ಮುಟ್ಟುಗೋಲು ಎನ್ಐಎ ಕೋರ್ಟ್ ಆದೇಶ ನೀಡಿತ್ತು. ಅದರಂತೆ ಎನ್ಐಎ ಅಧಿಕಾರಿಗಳು ಜೂನ್ 28ರಂದು ಸುಳ್ಯ ಪಟ್ಟಣದಲ್ಲಿ ಉದ್ಘೋಷಣೆ ಸಹ ಮಾಡಿದ್ದಾರೆ. ಆದರೆ ಆರೋಪಿಗಳು ಈವರೆಗೂ ಶರಣಾಗದ ಹಿನ್ನೆಲೆಯಲ್ಲಿ ಆಸ್ತಿ ಜಪ್ತಿಗೆ ಸಿದ್ಧತೆ ನಡೆಯುತ್ತಿದೆ.
ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿಗಳು ಅಂತಿಮ ಗಡುವು ವಿಧಿಸಿದ ಹೊರತಾಗಿಯೂ ಶರಣಾಗದಿರುವ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರೀಯ ತನಿಖಾ ತಂಡ(NIA)ದ ಅಧಿಕಾರಿಗಳು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಸಕಲ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನನು ಸಲ್ಲಿಸಿದೆ. ಅವರಲ್ಲಿ 14 ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ 6 ಮಂದಿಗಾಗಿ ಶೋಧ ನಡೆಸುತ್ತಿದ್ದಾರೆ.
ಅವರಲ್ಲಿ ಪ್ರಮುಖ ಆರೋಪಿಗಳಾದ ಉಮರ್ ಫಾರೂಕ್ ಮತ್ತು ಮುಸ್ತಾಫಾ ಪೈಚಾರ್ ಅವರು ಜೂನ್ 30ರೊಳಗೆ ಶರಣಾಗದೇ ಹೋದಲ್ಲಿ ಅವರ ಆಸ್ತಿ ಜಪ್ತಿ ಮಾಡುವಂತೆ ಬೆಂಗಳೂರಿನ ಎನ್ ಐಎ ನ್ಯಾಯಾಲಯ ಅದೇಶ ನೀಡಿತ್ತು. ಅದರಂತೆ ಎನ್ ಐಎ ಅಧಿಕಾರಿಗಳು ಸುಳ್ಯ ಪಟ್ಟಣದಲ್ಲಿ ಜೂನ್ 28ರಂದು ಆಟೋರಿಕ್ಷಾದಲ್ಲಿ ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಿದ್ದರು. ಆರೋಪಿಗಳು ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಇಷ್ಟು ಮಾತ್ರವಲ್ಲದೆ ಆರೋಪಿಗಳ ಮನೆಗಳಿಗೂ ನೋಟಿಸ್ ಅಂಟಿಸಿದ್ದರು. ಜೊತೆಗೆ ಈ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನವನ್ನೂ ಘೋಷಿಸಿದ್ದರು.
ಎನ್ಐಎ ಅಧಿಕಾರಿಗಳು ಆರೋಪಿಗಳ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಕಂದಾಯ ಇಲಾಖೆ ಮತ್ತು ಇತರ ಮೂಲಗಳಿಂದ ಸಂಗ್ರಹಿಸುತ್ತಿದೆ. ಜೊತೆಗೆ ಅವರು ಅಧಿಕೃತ ಬ್ಯಾಂಕ್ ಖಾತೆಗಳ ವಿವರಗಳನ್ನು ಸಹ ಸಂಗ್ರಹಿಸುತ್ತಿದ್ದಾರೆ.
ಆರೋಪಿಗಳ ಆಸ್ತಿಗಳ ಪಟ್ಟಿಯನ್ನು ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ನಂತರ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರಕ್ಕೆ ಹಸ್ತಾಂತರಿಸಲಿದೆ. ಪ್ರಕರಣಕ್ಕೆ ಸಂಬಂಧಿ ಮಾರ್ಚ್ 28ರಂದು ಎನ್ ಐಎ ಅಧಿಕಾರಿಗಳು ಸುಳ್ಯ ಪೇಟೆಯಲ್ಲಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI)ದ ಕಛೇರಿಯನ್ನು ಜಪ್ತಿ ಮಾಡಿತ್ತು. ಇದೇ ಕಛೇರಿಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಲಾಗಿತ್ತು.