ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ವಂಚನೆ: ಚೈತ್ರಾಳನ್ನು ಪರಪ್ಪನ‌ ಅಗ್ರಹಾರದಿಂದ ವಿಚಾರಣೆಗೆ ಕರೆತಂದ ಕೋಟ ಪೊಲೀಸರು

Spread the love

ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ವಂಚನೆ: ಚೈತ್ರಾಳನ್ನು ಪರಪ್ಪನ‌ ಅಗ್ರಹಾರದಿಂದ ವಿಚಾರಣೆಗೆ ಕರೆತಂದ ಕೋಟ ಪೊಲೀಸರು

ಉಡುಪಿ: ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಅವರ ವಿಚಾರಣೆಗೆ ಮಂಗಳವಾರ ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈಗಾಗಲೇ ವಂಚನೆ ಪ್ರಕರಣವೊಂದರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚೈತ್ರಾಳನ್ನು ಪೊಲೀಸ್ ಕಸ್ಟಡಿಗೆ ಪಡೆದ ಕೋಟ ಪೊಲೀಸರು ಮಂಗಳವಾರ ಬೆಂಗಳೂರಿನಿಂದ ಬ್ರಹ್ಮಾವರಕ್ಕೆ ಕರೆತಂದಿದ್ದರು. ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಕೋಟ ಪಿಎಸ್ ಐ ಶಂಭುಲಿಂಗಯ್ಯ ಮತ್ತವರ ತಂಡ ಸುಧೀನ ಅವರು ನೀಡಿದ ದೂರಿನ ಕುರಿತಂತೆ ದಿನವಿಡೀ ವಿಚಾರಣೆ ನಡೆಸಿತು. ವಿಚಾರಣೆ ಪೂರ್ಣಗೊಂಡ ಬಳಿಕ ಕೋಟ ಪಿಎಸ್ಐ ಶುಂಭುಲಿಂಗಯ್ಯ ಅವರು ಚೈತ್ರಾಳನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ನ್ಯಾಯಾಲಯ ಸಂಚಾರಿಪೀಠ ಬ್ರಹ್ಮಾವರ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಹಾಜರುಪಡಿಸಿದರು. ನ್ಯಾಯಾಲಯದ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಚೈತ್ರಾಳನ್ನು ಮಂಗಳೂರಿನ ಜೈಲಿಗೆ ಕಳುಹಿಸಿಕೊಡಲಾಯಿತು. ಅಲ್ಲಿಂದ ನಾಳೆ ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಏನಿದು ವಂಚನೆ ಪ್ರಕರಣ?:
ಕೋಟ ಠಾಣಾ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತ ಸುಧೀನ ಎಂಬುವರಿಗೆ 2015ರಲ್ಲಿ ಪರಿಚವಾದ ಚೈತ್ರಾ ತನಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ನಂಬಿಸಿ 2018 ರಿಂದ 2023 ರ ತನಕ ಬಟ್ಟೆ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದಿದ್ದಳು. ಮೂರು ಲಕ್ಷವನ್ನು ಚೈತ್ರಾ ಖಾತೆಗೆ ವರ್ಗಾಯಿಸಿದ್ದ ಸುದೀನ, ಉಳಿದ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ನೀಡಿದ್ದರು.

ಅಂಗಡಿಯ ಕುರಿತು ಕೇಳಿದಾಗೆಲ್ಲಾ ಚುನಾವಣಾ ಪ್ರಚಾರ, ಭಾಷಣ, ಕಾರ್ಯಕಾರಣಿ ಸಭೆ, ಪಕ್ಷದ ಮುಖಂಡರ ಭೇಟಿ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಚಯುತ್ರಾ ವರ್ತನೆ ನೋಡಿ ಅನುಮಾನಗೊಂಡ ಸುಧೀನ ಕೂಡಲೇ ಬಟ್ಟೆ ಅಂಗಡಿಗೆ ಒತ್ತಾಯಿಸಿದ್ದರು. ಈ ವೇಳೆ ಚೈತ್ರಾ ಸುಧೀನ ಅವರ ವಿರುದ್ದ ಸುಳ್ಳು ಅತ್ಯಾಚಾರ ಪ್ರಕರಣ ಕೊಡುತ್ತೇನೆ, ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಸದ್ಯ ಬೈಂದೂರಿನ ಉದ್ಯಮಿಯೋರ್ವರಿಗೆ ಐದು ಕೋಟಿ ವಂಚನೆ ಮಾಡಿದ್ದಾರೆ ಎಂಬ ದೂರು ದಾಖಲಾಗಿ ಬಂಧನವಾದ ಬಳಿಕ ಇತ್ತ ಸುಧೀನ ಅವರು ಕೂಡಾ ನನಗೂ ವಂಚನೆಯಾಗಿದೆ ಎಂದು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಚೈತ್ರಾ ವಿರುದ್ಧ 506, 417, 420 ಐಪಿಸಿ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿದ್ದರು.

ಕ್ಯಾಮೆರಾ ಕಂಡು ಟಾಟಾ ಮಾಡಿದ ಆರೋಪಿ ಚೈತ್ರಾ!:
ಬೆಳಿಗ್ಗೆಯಿಂದಲೂ ಬಹಳ ಲವಲವಿಕೆಯಲ್ಲಿದ್ದ ಚೈತ್ರಾ ಪೊಲೀಸ್ ಬಸ್ ನಲ್ಲಿ ಕೂತು ತಮಾಷೆ ಮಾಡುತ್ತಾ ಕಾಲ ಕಳೆದಿದ್ದಾಳೆ.‌ ಅಲ್ಲದೇ ತೆರಳುವಾಗ ಮಾಧ್ಯಮದ ಕ್ಯಾಮೆರಾ ಕಂಡು ಸೆಲೆಬ್ರಿಟಿಗಳಂತೆ ಟಾಟಾ ಮಾಡಿರುವುದು ಹಲವು ಅಚ್ಚರಿಗಳಿಗೆ ಎಡೆ ಮಾಡಿಕೊಟ್ಟಿದೆ.


Spread the love