ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀಕೃಷ್ಣ ಅನ್ನ ಪ್ರಸಾದಕ್ಕೆ ಯಶ್ಪಾಲ್ ಸುವರ್ಣ ಚಾಲನೆ
ಉಡುಪಿ: ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಅನ್ನ ಪ್ರಸಾದ ಅನ್ನಸಂತರ್ಪಣೆಗೆ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ ನಗರದ ಕೇಂದ್ರ ಭಾಗದಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 500 ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮಧ್ಯಾಹ್ನ ಊಟದ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಶಾಲಾ ಉಪನ್ಯಾಸಕರು ಈ ಬಗ್ಗೆ ಗಮನಕ್ಕೆ ತಂದಾಗ ಪರ್ಯಾಯ ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಯವರಲ್ಲಿ ಶ್ರೀ ಕೃಷ್ಣ ಮಠದ ವತಿಯಿಂದ ಪ್ರಸಾದ ರೂಪದಲ್ಲಿ ವಿದ್ಯಾರ್ಥಿಗಳಿಗೆ ಆಹಾರ ನೀಡುವಂತೆ ಮನವಿ ಮಾಡಿದಾಗ ಪರಮ ಪೂಜ್ಯ ಶ್ರೀಗಳು ವಿದ್ಯಾರ್ಥಿಗಳಿಗೆ ಅನ್ನ ಪ್ರಸಾದ ನೀಡಲು ಸಮ್ಮತಿ ನೀಡಿ ಆಶೀರ್ವಚಿಸಿ ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ.
ಪರಮ ಪೂಜ್ಯ ಶ್ರೀಗಳ ಶುಭಾಶೀರ್ವಾದದಿಂದ ಆರಂಭಗೊಂಡ ಈ ಶ್ರೀ ಕೃಷ್ಣ ಅನ್ನ ಪ್ರಸಾದ ಯೋಜನೆಯ ಮೂಲಕ ನಿರಂತರವಾಗಿ ಸಾಗಿ ಬಂದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಸಹಕಾರಿಯಾಗಲಿ ಹಾಗೂ ಸಂಪೂರ್ಣ ಸಹಕಾರ ನೀಡಿದ ಶ್ರೀ ಪುತ್ತಿಗೆ ಮಠದ ಸ್ವಾಮೀಜಿ ಗಳಿಗೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಕುಮಾರ್, ಶಿಕ್ಷಣ ಸೇವಾ ಸಮಿತಿಯ ಅಧ್ಯಕ್ಷರಾದ ರತ್ನಾಕರ, ಶ್ರೀಕೃಷ್ಣ ಮುಖ್ಯಪ್ರಾಣ ಅನ್ನಪ್ರಸಾದ ಸಮಿತಿಯ ಅಧ್ಯಕ್ಷರಾದ ಶೇಖರ ಕೋಟ್ಯಾನ್, ನಿವೃತ್ತ ಪ್ರಾಂಶುಪಾಲರಾದ ತಾರಾದೇವಿ ಎಚ್., ಪ್ರಮುಖರಾದ ಯೋಗೀಶ್ ಕೋಟ್ಯಾನ್, ಶಿಕ್ಷಣ ಸೇವಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರು, ಕಾಲೇಜು ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.