ಬೆಳೆಯುತ್ತಿರುವ ಮಂಗಳೂರಿಗೆ ಸಿಟಿ ಬಸ್ ಮಾರ್ಗಗಳ ವಿಸ್ತರಣೆಗೆ ಸಂಸದ ಕ್ಯಾ. ಚೌಟ ನೀಡಿದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ
ಮಂಗಳೂರು: ಮಂಗಳೂರು ನಗರದ ಕೆಲವು ಪ್ರಮುಖ ಸಿಟಿ ಬಸ್ ಮಾರ್ಗಗಳ ಬದಲಾವಣೆ ಮತ್ತು ವಿಸ್ತರಣೆಯ ಅಗತ್ಯತೆ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬರೆದಿರುವ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಮುಂಬರುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (RTA) ಸಭೆಯಲ್ಲಿ ತುರ್ತಾಗಿ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೋರಿ ಅಪರ ಜಿಲ್ಲಾಧಿಕಾರಿಗಳು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದೆ.
ಇದರೊಂದಿಗೆ, ಮಂಗಳೂರು ನಗರದ ಭೌಗೋಳಿಕ ಮತ್ತು ಜನಸಂಖ್ಯಾ ಬೆಳವಣಿಗೆಗೆ ಪೂರಕವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಹಾಗೂ ಪ್ರಯಾಣಿಕರ ದೈನಂದಿನ ಸಂಚಾರವನ್ನು ಸುಗಮಗೊಳಿಸಲು ಸಂಸದರು ನೀಡಿರುವ ಈ ಪ್ರಸ್ತಾವನೆಗೆ ಈಗ ಜಿಲ್ಲಾಡಳಿತದ ಸಂಪೂರ್ಣ ಬೆಂಬಲ ಸಿಕ್ಕಂತಾಗಿದೆ. ನಗರದ ಗಡಿಗಳು ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದ್ದರೂ, ಸಾರ್ವಜನಿಕ ಬಸ್ಸುಗಳು ಇನ್ನೂ ಹಳೆಯ ಹಾಗೂ ಸಣ್ಣ ಮಾರ್ಗಗಳಲ್ಲೇ ಸಂಚರಿಸುತ್ತಿರುವುದರಿಂದ ಸಾರ್ವಜನಿಕರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಜಿಲ್ಲಾಡಳಿತದ ಈ ಮಹತ್ವದ ನಿರ್ಧಾರದಿಂದಾಗಿ ಶೀಘ್ರದಲ್ಲೇ ಮುಕ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಜಿಲ್ಲಾಡಳಿತಕ್ಕೆ ಬರೆದಿದ್ದ ಪತ್ರದಲ್ಲಿ ಮಂಗಳೂರು ನಗರದ ಪ್ರಸ್ತುತ ಸಾರಿಗೆ ಸ್ಥಿತಿ-ಗತಿಗಳ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ನಗರವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಚಾಲ್ತಿಯಲ್ಲಿರುವ ಹಲವು ಸಿಟಿ ಬಸ್ಸುಗಳು ಇನ್ನೂ ಹಳೆಯ ಮತ್ತು ಸಣ್ಣ ಮಾರ್ಗಗಳಲ್ಲೇ ಸಂಚರಿಸುತ್ತಿರುವುದರಿಂದ ಸಾರ್ವಜನಿಕರ ಹೆಚ್ಚುತ್ತಿರುವ ಸಾರಿಗೆ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇಂತಹ ಹಳೆಯ ಮಾರ್ಗಗಳಿಂದಾಗಿ ಬಸ್ ಆಪರೇಟರ್‌ಗಳಿಗೂ ಆರ್ಥಿಕವಾಗಿ ನಷ್ಟ ಉಂಟಾಗುತ್ತಿದ್ದು, ಬದಲಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಈ ಮಾರ್ಗಗಳನ್ನು ವಿಸ್ತರಿಸುವುದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಸಾರಿಗೆ ವ್ಯವಸ್ಥೆಯನ್ನು ಲಾಭದಾಯಕವಾಗಿ ನಡೆಸಲು ಇರುವ ಏಕೈಕ ತಾರ್ಕಿಕ ಮಾರ್ಗವಾಗಿದೆ ಎಂದು ಸಂಸದರು ಸ್ಪಷ್ಟಪಡಿಸಿದ್ದರು.
ಸಾರ್ವಜನಿಕ ವಲಯದಿಂದ ಬಂದಿರುವ ವ್ಯಾಪಕ ಪ್ರತಿಕ್ರಿಯೆಗಳು ಮತ್ತು ಸ್ಥಳೀಯ ಅಗತ್ಯತೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಸಂಸದರು, ಸದ್ಯ ಮೂರು ಪ್ರಮುಖ ಬಸ್ ಮಾರ್ಗಗಳ ವಿಸ್ತರಣೆಗೆ ಬಲವಾದ ಶಿಫಾರಸು ಮಾಡಿದ್ದಾರೆ. ಮಾರ್ಗ ಸಂಖ್ಯೆ 5 ಅನ್ನು ಮೊರ್ಗನ್ಸ್ ಗೇಟ್‌ನಿಂದ ಜೆಪ್ಪಿನಮೊಗರುವಿನವರೆಗೆ ವಿಸ್ತರಿಸಲು ಕೋರಲಾಗಿದೆ. ಹಾಗೆಯೇ, ಬೈಕಂಪಾಡಿ ಭಾಗದ ಕೈಗಾರಿಕಾ ಕಾರ್ಮಿಕರು ಮತ್ತು ನಿತ್ಯ ಪ್ರಯಾಣಿಕರ ಹಿತದೃಷ್ಟಿಯಿಂದ ಮಾರ್ಗ ಸಂಖ್ಯೆ 7 ಅನ್ನು ಉರ್ವ ಸ್ಟೋರ್‌ನಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದವರೆಗೆ ಹಾಗೂ ದೇಶ-ವಿದೇಶಗಳ ಪ್ರವಾಸಿಗರಿಗೆ ಮತ್ತು ಸ್ಥಳೀಯ ಸಂದರ್ಶಕರಿಗೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮಾರ್ಗ ಸಂಖ್ಯೆ 13 ಅನ್ನು ಪಣಂಬೂರು ಬೀಚ್‌ನ ಒಳಭಾಗದವರೆಗೆ ವಿಸ್ತರಿಸಲು ಸಂಸದರು ಬರೆದಿದ್ದ ಪತ್ರದಲ್ಲಿ ಕೋರಲಾಗಿದೆ. ಈ ಪ್ರಸ್ತಾವಿತ ಮಾರ್ಗ ವಿಸ್ತರಣೆಗಳು ಕೇವಲ ದೈನಂದಿನ ಪ್ರಯಾಣಿಕರಾದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ನೆರವಾಗುವುದಷ್ಟೇ ಅಲ್ಲದೆ, ಕರಾವಳಿಯ ಪ್ರಮುಖ ಪ್ರವಾಸಿ ತಾಣಗಳಿಗೆ ನೇರ ಸಂಪರ್ಕ ಒದಗಿಸುವ ಮೂಲಕ ಸ್ಥಳೀಯ ಪ್ರವಾಸೋದ್ಯಮದ ಬೆಳವಣಿಗೆಗೂ ದೊಡ್ಡ ಉತ್ತೇಜನ ನೀಡಲಿವೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳ ಕಚೇರಿಯು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅಧಿಕೃತವಾಗಿ ಪತ್ರ ಬರೆದಿದೆ. ಸಂಸದರು ಪ್ರಸ್ತಾಪಿಸಿರುವ ಈ ಮೂರೂ ಮಾರ್ಗಗಳ ಸಾಧಕ-ಬಾಧಕಗಳು ಮತ್ತು ಕಾರ್ಯಸಾಧ್ಯತೆಯ ಬಗ್ಗೆ ಸಮಗ್ರವಾಗಿ ಪರಿಶೀಲಿಸಬೇಕು ಹಾಗೂ ತುರ್ತಾಗಿ ಅಗತ್ಯ ಶಿಫಾರಸುಗಳೊಂದಿಗೆ ಮುಂಬರುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಸೂಕ್ತ ಪರಿಗಣನೆಗಾಗಿ ಮತ್ತು ತುರ್ತು ನಿರ್ಧಾರಕ್ಕಾಗಿ ಕಡ್ಡಾಯವಾಗಿ ಮಂಡಿಸಬೇಕು ಎಂದು ಜಿಲ್ಲಾಡಳಿತವು ತಮ್ಮ ಪತ್ರದಲ್ಲಿ ಸೂಚನೆ ನೀಡಿದೆ.













