ಬ್ರಹ್ಮಾವರ ಒರ್ಥೋಡಕ್ಸ್ ಸೀರಿಯನ್ ಟ್ರಸ್ಟಿ ನಿಂದ ಅಶಕ್ತ ಕುಟುಂಬಕ್ಕೆ ‘ಬೆತ್ಲೆಹೆಮ್’ ಮನೆ ಹಸ್ತಾಂತರ
ಬ್ರಹ್ಮಾವರ: ಬ್ರಹ್ಮಾವರ ಒರ್ಥೋಡಕ್ಸ್ ಸೀರಿಯನ್ ಕೊಂಕಣಿ ವೆಲ್ಫೇರ್ ಟ್ರಸ್ಟ್ (ರಿ) ದಾನಿಗಳಾದ ಮೊಸೆಸ್ ಲೂವಿಸ್ ಮತ್ತು ಕುಟುಂಬಸ್ಥರು ಮಂಗಳೂರು ಇವರ ನೆರವಿನಿಂದ ಬಾರ್ಕೂರು ಕೂರಾಡಿಯ ಅಶಕ್ತ ಕುಟುಂಬದ ಮೊನಿಕಾ ಡಿಸೋಜಾ ಅವರಿಗೆ ನೂತನ ಸುಸಜ್ಜಿತವಾದ ರೆ.ಫಾ.ಕೆ.ಟಿ. ವರ್ಗಿಸ್ ಮೆಮೋರಿಯಲ್ ಹೌಸ್ ‘ಬೆತ್ಲೆಹೆಮ್’ ಹೆಸರಿನಲ್ಲಿ ನಿರ್ಮಾಣವಾಗಿದ್ದು ಅದರ ಹಸ್ತಾಂತರ ಕಾರ್ಯಕ್ರಮ ಭಾನುವಾರ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಡಾ|ಮೊಹಮ್ಮದ್ ರಫೀಕ್ ಮಾತನಾಡಿ ಟ್ರಸ್ಟ್ ನೋಂದಾವಣೆಗೊಂಡು ಉದ್ಘಾಟನೆಗೊಳ್ಳುವ ಮೊದಲೇ ಇಂತಹ ಉತ್ತಮ ಕಾರ್ಯವನ್ನು ನಿರ್ವಹಿಸಿದ್ದಕ್ಕೆ ಅಭಿನಂದಿಸಿದರು. ಒಂದು ಟ್ರಸ್ಟ್ ಎಂದಾಗ ಆ ಟ್ರಸ್ಟಿಗಳ ಮನೋಸ್ಥಿತಿ ವಿಭಿನ್ನವಾಗಿರುತ್ತದೆ. ಆದರೆ ಬ್ರಹ್ಮಾವರ ಓರ್ಥೋಡಕ್ಸ್ ಸೀರಿಯನ್ ಕೊಂಕಣಿ ವೆಲ್ಫೇರ್ ಟ್ರಸ್ಟ್ ಸಮಾನ ಮನಸ್ಕರನ್ನು ಒಳಗೊಂಡು ಸಮಾಜದ ನೊಂದವರ ಕಣ್ಣೀರು ಒರೆಸುವಲ್ಲಿ ಸಫಲವಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಡಾ|ಸುನೀತಾ ಶೆಟ್ಟಿಯವರು ಮಾತನಾಡಿ ಪ್ರತಿಯೊಂದು ಸಮಾಜದಲ್ಲಿ ಇಂತಹ ನೊಂದವರನ್ನು ಗುರುತಿಸಿ ಇಂತಹ ವ್ಯವಸ್ಥೆಗಳನ್ನು ಕಲ್ಪಿಸಿದಾಗ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಹಾಗೇಯೇ ಟ್ರಸ್ಟ್ ಮುಂದಿನ ದಿನಗಳಲ್ಲಿ ಒಳ್ಳೆಯ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡು ಇತರ ಸಮುದಾಯದವರಿಗೆ ಈ ಟ್ರಸ್ಟ್ ವತಿಯಿಂದ ನೆರವು ದೊರಕುವಂತಾಗಲಿ ಎಂದರು.
ಮನೆಯ ಆಶೀರ್ವಚನ ಕಾರ್ಯಕ್ರಮವನ್ನು ಧರ್ಮಗುರು ವಂ|ಲೋರೆನ್ಸ್ ಡಿ’ಸೋಜಾ, ವಂ|ನೊವೆಲ್ ಲೂವಿಸ್, ವಂ|ಡೇವಿಡ್ ಕ್ರಾಸ್ತಾ, ವಂ|ಆಬ್ರಾಹಾಮ್ ಕುರಿಯಾಕೋಸ್ ನೆರವೇರಿಸಿದರು.
ಟ್ರಸ್ಟಿನ ಎಲ್ಲಾ ಟ್ರಸ್ಟಿಗಳು, ಚರ್ಚಿನ ಸ್ತ್ರೀ ಸಂಘಟನೆಯವರು, ಯುವಕ ಸಂಘಟನೆಯ ಸದಸ್ಯರು ಹಾಗೂ ಚರ್ಚಿನ ಸಮಸ್ತ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಬುಟ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.













