ಬ್ರಹ್ಮಾವರ: ಎಳೆ ಗಿಡದಲ್ಲಿ ಯಾವ ರೀತಿ ಮೊಗ್ಗು, ಚಿಗುರು ಅರಳುತ್ತದೆಯೋ, ಅದೇ ರೀತಿ ಪ್ರತಿಯೊಂದು ಎಳೆ ಮಕ್ಕಳಲ್ಲಿ ಪ್ರತಿಭೆ ಹುದುಗಿರುತ್ತದೆ. ಅದನ್ನು ಸರಿಯಾಗಿ ಪೋಷಿಸುವ ಕೆಲಸವಾಗಬೇಕು ಎಂದು ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಜಿ ಹೇಳಿದರು.
ಸಾಲಿಗ್ರಾಮ ಗಣೇಶ ಕೃಪಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಗಾಣಿಗ ಯುವ ಸಂಘಟನೆ ಕೋಟ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ನೋಟ್ ಪುಸ್ತಕ, ಕೊಡೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಘಟಕದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಐರೋಡಿ ಗ್ರಾಮ ಪಂಚಾಯಿತಿಗೆ ನೂತನವಾಗಿ ಸದಸ್ಯರಾಗಿ ಆಯ್ಕೆಯಾದ ಸಮಾಜದ ಆನಂದ ಗಾಣಿಗ ಮಾಬುಕಳ ಅವರನ್ನು ಸನ್ಮಾನಿಸಲಾಯಿತು.
ಕೋಟ ಘಟಕ ವ್ಯಾಪ್ತಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಒಂದನೇ ತರಗತಿಯಿಂದ ಪಿಯುಸಿವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಕೊಡೆಗಳನ್ನು ವಿತರಿಸಲಾಯಿತು.
ಉಡುಪಿ ಜಿಲ್ಲಾ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ದಿನೇಶ್ ಗಾಣಿಗ ಕೋಟ, ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಸುರೇಂದ್ರ ಗಾಣಿಗ ಸ್ವಾಗತಿಸಿದರು. ರಾಜೇಶ ಅಚ್ಲಾಡಿ ವಂದಿಸಿದರು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.
 
            


