ಮಂಗಳೂರು: ಗೋ ಕಳ್ಳ ಸಾಗಾಟದ ವಿರುದ್ದ ವಿಹಿಂಪ ವತಿಯಿಂದ ಜುಲೈ 13 ರಂದು ಬೃಹತ್ ಪ್ರತಿಭಟನೆ

Spread the love

ಮಂಗಳೂರು : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋ ಕಳ್ಳ ಸಾಗಾಟ, ಗೋಹತ್ಯೆ ಪ್ರಕರಣಗಳನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌, ಗೋಸಂರಕ್ಷಣಾ ಸಮಿತಿ ವತಿಯಿಂದ ಕರಾವಳಿ ಜಿಲ್ಲೆಗಳ ಬೃಹತ್‌ ಪ್ರತಿಭಟನೆ ಜುಲೈ 13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದೆ ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್‌ ಹೇಳಿದರು.

vhpprotest-cowtrafficking-20150708 3304x2122

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಗೋಹತ್ಯೆ, ದನಗಳ ಸರಣಿ ಕಳ್ಳತನ, ಹಿಂಸಾತ್ಮಕ ರೀತಿಯ ಸಾಗಾಟದಂತಹ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಗುಡ್ಡದಲ್ಲಿ ಮೇಯಲು ಬಿಟ್ಟ ದನಗಳು ಸುರಕ್ಷಿತವಾಗಿ ಮರಳುತ್ತವೆ ಎಂಬ ನಂಬಿಕೆ ಇಲ್ಲದಾಗಿದೆ. ಹಟ್ಟಿಯಲ್ಲಿ ಕಟ್ಟಿ ಹಾಕಿದ ದನಕರುಗಳನ್ನು ರಾತ್ರಿ ಅಪಹರಿಸಿ ಹತ್ಯೆಗೈಯುವ ಕೃತ್ಯಗಳೂ ನಡೆಯುತ್ತಿವೆ. ಪದೇಪದೇ ಇಂತಹ ಘಟನೆ ಸಂಭವಿಸುತ್ತಿದ್ದರೂ ರಾಜ್ಯ ಸರಕಾರ ಮತ್ತು ಪೊಲೀಸ್‌ ಇಲಾಖೆ ನಿರ್ಲಕ್ಷé ವಹಿಸಿದೆ ಎಂದು ಆರೋಪಿಸಿದರು.

ಪ್ರತಿಭಟನೆಗೂ ಮುನ್ನ ಬೃಹತ್‌ ವಾಹನ ಜಾಥಾ ನಡೆಯಲಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಸುಮಾರು 10,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಉಡುಪಿ, ಮೂಡಬಿದಿರೆ, ಧರ್ಮಸ್ಥಳ, ಪುತ್ತೂರು, ತಲಪಾಡಿ ಮುಂತಾದೆಡೆಗಳಿಂದ ಬರುವ ವಾಹನ ಜಾಥಾ ಬಳಿಕ ಪಣಂಬೂರು, ಕುಡುಪು, ಅಡ್ಯಾರು ಹಾಗೂ ಮಹಾವೀರ ವೃತ್ತಗಳಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಬಂದು ಸಂಜೆ 4ಕ್ಕೆ ಕೇಂದ್ರ ಮೈದಾನದಲ್ಲಿ ಸೇರಲಿದ್ದಾರೆ ಎಂದು ಗೋಸಂರಕ್ಷಣಾ ಸಮಿತಿ ಸಂಚಾಲಕ ಡಾ| ಪಿ. ಅನಂತಕೃಷ್ಣ ಭಟ್‌ ತಿಳಿಸಿದರು.

ಬಜರಂಗದಳ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌, ವಿಹಿಂಪ ಅಧ್ಯಕ್ಷ ಜಗದೀಶ್‌ ಶೇಣವ, ವಿಹಿಂಪ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಕಾರ್ಯದರ್ಶಿ ಗೋಪಾಲ್‌, ಬಜರಂಗದಳ ಸಂಚಾಲಕ ಭುಜಂಗ ಕುಲಾಲ್‌ ಮೊದಲಾದವರು ಉಪಸ್ಥಿತರಿದ್ದರು.

 


Spread the love