ಮಂಗಳೂರು:  ಜೈಲು ಸೇರಿ, ಬೇಲ್ ಪಡೆದು ಪುನಃ ಹುದ್ದೆ ಪಡೆದಿದ್ದ ಗಣಿ ಇಲಾಖೆ ಅಧಿಕಾರಿ ಕೃಷ್ಣವೇಣಿ ಅಮಾನತು

Spread the love

ಮಂಗಳೂರು:  ಜೈಲು ಸೇರಿ, ಬೇಲ್ ಪಡೆದು ಪುನಃ ಹುದ್ದೆ ಪಡೆದಿದ್ದ ಗಣಿ ಇಲಾಖೆ ಅಧಿಕಾರಿ ಕೃಷ್ಣವೇಣಿ ಅಮಾನತು

ಮಂಗಳೂರು: ಲಂಚ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನು ಪಡೆದು ಹೊರಬಂದು ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದ ಇಲ್ಲಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

ಲಂಚ ಪಡೆದ ಆರೋಪದ ಮೇಲೆ 18 ದಿನ ಬಂಧನದಲ್ಲಿದ್ದ ಕೃಷ್ಣವೇಣಿ ಅವರನ್ನು ಅಮಾನತುಗೊಳಿಸದೇ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿಗೆ ಶನಿವಾರ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಅಮಾನತು ಅದೇಶ ಹೊರಬಿದ್ದಿದೆ.

ಚಾಲಕನ ಮೂಲಕ ₹50 ಸಾವಿರ ಲಂಚ ಪಡೆದ ಆರೋಪದ ಮೇಲೆ ಕೃಷ್ಣವೇಣಿ ಅವರನ್ನು ಲೋಕಾಯುಕ್ತ ಪೊಲೀಸರು ಮೇ 28ರಂದು ಬಂಧಿಸಿದ್ದರು. ಅವರು ಜಾಮೀನು ಪಡೆದು ಜೂನ್ 18ರಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು.

ಯಾವುದೇ ಅಧಿಕಾರಿ 48 ಗಂಟೆಗಿಂತ ಹೆಚ್ಚು ಸಮಯ ಬಂಧನದಲ್ಲಿದ್ದರೆ, ಅವರನ್ನು ಅಮಾನತು ಮಾಡಲು ಸರ್ಕಾರ ಕ್ರಮಕೈಗೊಳ್ಳುತ್ತದೆ. ಆದರೆ, ಕೃಷ್ಣವೇಣಿ ಅವರ ವಿಚಾರದಲ್ಲಿ ಈ ನಿಯಮ ಪಾಲನೆ ಆಗಿರಲಿಲ್ಲ.

ಉಳ್ಳಾಲ ತಾಲ್ಲೂಕು ಇರಾ ಗ್ರಾಮದ ವ್ಯಕ್ತಿಯೊಬ್ಬರು ಮನೆ ನಿರ್ಮಿಸಲು ಉದ್ದೇಶಿಸಿದ್ದ ಜಾಗದಲ್ಲಿದ್ದ ಕಟ್ಟಡದ ಕಲ್ಲು ತೆಗೆದು ಸಮತಟ್ಟುಗೊಳಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ತನ್ನ ಚಾಲಕನ ಮೂಲಕ ₹50 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ಕೃಷ್ಣವೇಣಿ, ಕಚೇರಿ ಪ್ರಥಮ ದರ್ಜೆ ಸಹಾಯಕ ಪ್ರದೀಪ್ ಕುಮಾರ್ ಆರ್. ಹಾಗೂ ಚಾಲಕ ಮಧು ಸಿ. ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.

ಲಂಚ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸಿಬ್ಬಂದಿ ಪ್ರದೀಪ್ ಅವರನ್ನು ಮೇ 28ರಂದೇ ಅಮಾನತುಗೊಳಿಸಲಾಗಿತ್ತು. ಚಾಲಕ ಮಧು ಹೊರಗುತ್ತಿಗೆ ನೌಕರನಾಗಿದ್ದರಿಂದ ಅಮಾನತು ಪ್ರಶ್ನೆ ಬರುವುದಿಲ್ಲ. ಕೃಷ್ಣವೇಣಿ ಅವರನ್ನು ಮೇ. 28ರಿಂದಲೇ ಅನ್ವಯವಾಗುವಂತೆ ಅಮಾನತುಗೊಳಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ದಕ್ಷಿಣ ಕನ್ನಡ ಹಿರಿಯ ಭೂ ವಿಜ್ಞಾನಿಯಾಗಿ ಉಡುಪಿ ಜಿಲ್ಲೆಯ ಅಧಿಕಾರಿಯಾಗಿರುವ ಸಂದೀಪ್ ಜಿ.ಯು. ಅವರಿಗೆ ಪ್ರಭಾರ ಹೊಣೆ ವಹಿಸಲಾಗಿದೆ.


Spread the love