ಮಂಗಳೂರು ಪೊಲೀಸರಿಂದ 12 ಕೆ.ಜಿ. ಗಾಂಜಾ ವಶ – 11 ವಿದ್ಯಾರ್ಥಿಗಳ ಬಂಧನ

Spread the love

ಮಂಗಳೂರು ಪೊಲೀಸರಿಂದ 12 ಕೆ.ಜಿ. ಗಾಂಜಾ ವಶ – 11 ವಿದ್ಯಾರ್ಥಿಗಳ ಬಂಧನ

ಮಂಗಳೂರು: ಮಂಗಳೂರು ದಕ್ಷಿಣ ಠಾಣಾ ಪೊಲೀಸ್‌ಗಳು ಶನಿವಾರ (ಸೆಪ್ಟೆಂಬರ್ 26) ಸಂಜೆ ದೊಡ್ಡ ಮಟ್ಟದ ಮಾದಕ ವಸ್ತು ದಾಳಿ ನಡೆಸಿ 12.2 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದು, 11 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಸಂಜೆ 7.45ರ ಸುಮಾರಿಗೆ ದಕ್ಷಿಣ ಠಾಣಾ ಅಪರಾಧ ಪತ್ತೆ ಸಿಬ್ಬಂದಿಗಳಿಗೆ ಕೇರಳ ಮೂಲದ ಕೆಲವರು ಅತ್ತಾವರ ಕಾಪ್ರಿಗುಡ್ಡೆಯ ಕಿಂಗ್ಸ್ ಕೋರ್ಟ್ ಅಪಾರ್ಟ್‌ಮೆಂಟ್‌ನ ಪ್ಲಾಟ್ ನಂ. G1ರಲ್ಲಿ ವಾಣಿಜ್ಯ ಪ್ರಮಾಣದ ಗಾಂಜಾ ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸ್ ಉಪನಿರೀಕ್ಷಕ ಶೀತಲ್ ಅಲಗೂರು ಅವರ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿ ಅದೈತ್ ಶ್ರೀಕಾಂತ್, ಮುಹಮ್ಮದ್ ಅಫ್ರಿನ್, ಮುಹಮ್ಮದ್ ಸ್ಕಾನೀದ್, ನಿಬಿನ್ ಟಿ ಕುರಿಯನ್, ಮುಹಮ್ಮದ್ ಕೆ.ಕೆ., ಮುಹಮ್ಮದ್ ಹನಾನ್, ಮುಹಮ್ಮದ್ ಶಾಮಿಲ್, ಅರುಣ್ ತೋಮಸ್, ಮುಹಮ್ಮದ್ ನಿಹಾಲ್ ಸಿ., ಮುಹಮ್ಮದ್ ಜಾಸೀಲ್ ವಿ. ಹಾಗೂ ಸಿದಾನ್ ಪಿ. ಸೇರಿದಂತೆ 11 ಜನರನ್ನು ಬಂಧಿಸಲಾಯಿತು.

ಬಂಧಿತರಾದ ಎಲ್ಲರೂ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.

ದಾಳಿಯಲ್ಲಿ 12 ಕೆ.ಜಿ 264 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹2,45,280), 2 ಡಿಜಿಟಲ್ ತೂಕ ಮಾಪನ ಯಂತ್ರಗಳು (₹2,000) ಹಾಗೂ 11 ಮೊಬೈಲ್ ಫೋನ್‌ಗಳು (₹1,05,000) ಸೇರಿ ಒಟ್ಟು ₹3,52,280 ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.

ಮಂಗಳೂರು ಸೆಂಟ್ರಲ್ ಉಪವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರ ಮಾರ್ಗದರ್ಶನದಲ್ಲಿ, ದಕ್ಷಿಣ ಠಾಣಾ ಪಿಐ ಗುರುರಾಜ್, ಪಿಎಸ್ಐ ಶೀತಲ್ ಅಲಗೂರು ಮತ್ತು ಮಾರುತಿ ಪಿ. ಹಾಗೂ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.


Spread the love
Subscribe
Notify of

0 Comments
Inline Feedbacks
View all comments