ಮಂಗಳೂರು | ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
ಮಂಗಳೂರು: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಅಪರಾಧ ಸಂ.193/2019 ಪ್ರಕರಣದಲ್ಲಿ ಆರೋಪಿಯಾಗಿದ್ದ ಹಾಗೂ ಸುಮಾರು ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬಂಟ್ವಾಳ ತಾಲೂಕಿನ ಕನ್ಯಾನ ನಿವಾಸಿ ಇಬ್ರಾಹಿಂ ಬಾತೀಸ್ ಬಂಧಿತ ಆರೋಪಿ. ಈತನ ವಿರುದ್ಧ ಐಪಿಸಿ ಕಲಂ 427, 504, 394, 341 ಹಾಗೂ ಸಾರ್ವಜನಿಕ ಆಸ್ತಿ ನಾಶ ಮತ್ತು ನಷ್ಟ ತಡೆ ಕಾಯ್ದೆ 2(A) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಸುಮಾರು ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಂಗಿದ್ದ ಆರೋಪಿ, ಫೆಬ್ರವರಿ 24, 2026 ರಂದು ವಿದೇಶದಿಂದ ಮಂಗಳೂರಿಗೆ ಮರಳುತ್ತಿದ್ದಾಗ ವಿಮಾನ ನಿಲ್ದಾಣದ ಇಮಿಗ್ರೇಶನ್ ವಿಭಾಗದ ಸಹಕಾರದಿಂದ ವಿಟ್ಲ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ (HC 668) ಮತ್ತು ಪೊಲೀಸ್ ಕಾನ್ಸ್‌ಟೇಬಲ್ (PC 2465) ಬಂಧಿಸಿದರು.
ಬಂಧಿತನನ್ನು ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಮಾರ್ಚ್ 7, 2026ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.













