ಮಗುವಿಗೆ ತಾಯಿಯ ಗರ್ಭದಲ್ಲಿರುವಾಗಲೇ ಸಂಸ್ಕಾರ ಸಿಗಬೇಕು – ಅದಮಾರು ಶ್ರೀ

Spread the love

ಮಗುವಿಗೆ ತಾಯಿಯ ಗರ್ಭದಲ್ಲಿರುವಾಗಲೇ ಸಂಸ್ಕಾರ ಸಿಗಬೇಕು – ಅದಮಾರು ಶ್ರೀ

ಮಲ್ಪೆ : ಹುಟ್ಟುವ ಮಕ್ಕಳಿಗೆ ಗರ್ಭದಲ್ಲಿರುವಾಗಲೇ ತಾಯಿ ಸಂಸ್ಕಾರವನ್ನು ಕೊಡುವಂತಾದರೆ ಮಾತ್ರ ಮುಂದೆ ಆ ತಂದೆ ತಾಯಿ ವೃದ್ದಾಶ್ರಮ ಸೇರುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.

ಅವರು ಶನಿವಾರ ಕೊಡವೂರು ಮೂಡುಬೆಟ್ಟು ಶ್ರೀ ಕೃಷ್ಣ ವೃದ್ಧಾಶ್ರಮದ ನೂತನ ಕಟ್ಟಡದ ಶಿಲಾನ್ಯಾಸಗೈದು ಆಶೀರ್ವಚನ ನೀಡಿದರು.

ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಕಳಿಸಿಕೊಡುವಲ್ಲಿ ಮಕ್ಕಳನ್ನು ದೂರುವುದಕ್ಕಿಂತ ಅದಕ್ಕೆ ಮೂಲ ಕಾರಣ ಅವರ ತಂದೆ ತಾಯಿಗಳು. ಹೆತ್ತವರು ತಮ್ಮ ಮಕ್ಕಳಿಗೆ ಆರಂಭದಲ್ಲಿಯೇ ಒಳ್ಳೆಯ ಸಂಸ್ಕಾರವನ್ನು ನೀಡಿದ್ದರೆ ಹೆತ್ತವರಿಗೆ ಈ ರೀತಿಯ ಪರಿಸ್ಥಿತಿ ಎದುರಾಗುವುದಿಲ್ಲ. ಲೌಕಿಕ ಶಿಕ್ಷಣದಿಂದಾಗಿ ಇಂದು ಸಂಬಂಧಗಳು ಕಳಚಿಕೊಳ್ಳುತ್ತಿದೆ. ಮನಪರಿವರ್ತನದ ಮೂಲಕ ಈ ಆಶ್ರಮವು ಬೆಳೆಯುವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮೀನುಗಾರಿಕಾ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ ನಮ್ಮನ್ನು ಹೆತ್ತು ಸಲಹಿಸಿದ ತಂದೆ ತಾಯಿಯನ್ನು ಸಾಕುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಅದನ್ನು ಚಾಚೂ ತಪ್ಪದೆ ನಾವೆಲ್ಲರೂ ನಿರ್ವಹಿಸಬೇಕು ಎಂಬ ಸಂದೇಶ ಇಂದಿನ ಕಾರ್ಯಕ್ರಮದ ಮೂಲಕ ಇಡೀ ಲೋಕಕ್ಕೆ ತಿಳಿಯುವಂತಾಗಲಿ ಎಂದ ಅವರು ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಗರಿಷ್ಟ ಮೊತ್ತದ ಅನುದಾನವನ್ನು ದೊರಕಿಸಿಕೊಡವಲ್ಲಿ ಪ್ರಯತ್ನಿಸಲಾಗುವುದು ಎಂದರು.

ವಿದೇಶದಲ್ಲಿ ಮಕ್ಕಳು, ಸ್ವದೇಶದಲ್ಲಿ ಹೆತ್ತವರು:
ವಿದೇಶದಲ್ಲಿ ಮಕ್ಕಳಿಗೆ 18 ವರ್ಷ ದಾಟಿದ ನಂತರ ಅವರು ಸ್ವತಂತ್ರವಾಗಿ ಬೆಳೆಯಬೇಕು ಎಂದು ಅವರು ಹೆತ್ತವರೇ ತಮ್ಮ ಮಕ್ಕಳನ್ನು ಹೊರಗೆಹಾಕ್ತಾರೆ, ಆದರೆ ನಮ್ಮ ಭಾರತ ದೇಶದಲ್ಲಿ ಮಕ್ಕಳೇ ತಮ್ಮ ತಂದೆತಾಯಿಗಳನ್ನು ಹೊರಗೆ ಹಾಕುವ ಪರಿಸ್ಥಿತಿ ಎದುರಾಗಿದೆ. ಎಲ್ಲರೂ ಒಟ್ಟಿಗೆ ಜೀವನವನ್ನು ನಡೆಸುವ ಅಗತ್ಯವಿದೆ. ಹೆತ್ತವರು ಮಾಡುವ ಏನು ತೊಂದರೆಗಳಿವೆಅದನ್ನು ನಿವಾರಿಸಿಕೊಂಡು ಹೋಗುವ ಹೊಣೆಗಾರಿಕೆ ಮಕ್ಕಳ ಮೇಲಿದೆ ಎಂದು ಸಚಿವರು ಹೇಳಿದರು.

ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ. ಬೀ. ವಿಜಯ ಬಲ್ಲಾಳ್, ಉದ್ಯಮಿ ರಾಘವೇಂದ್ರ ಆಚಾರ್ಯ, ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯ ಹಾರ್ಮಿಸ್ ನರೋನ್ಹಾ , ಹಿರಿಯ ನಾಗರಿಕ ಇಲಾಖೆಯ ಇಲಾಖಾ„ಕಾರಿ ನಿರಂಜನ ಭಟ್, ಮಾರ್ಗದರ್ಶಕರಾದ ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ, ಕಡೆಕಾರು ಶ್ರೀಶಭಟ್, ಶ್ರೀಧರ ಭಟ್, ದೇವಿ ಪ್ರಸಾದ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ವಿಷ್ಣುಮೂರ್ತಿ, ರಘುವೀರ್ ಬಲ್ಲಾಳ್, ಶ್ರೀಶ ಕೊಡವೂರು, ಗಣೇಶ್ ಮಧ್ಯಸ್ಥ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯಡ್ಕ ರಾಧಾಕೃಷ್ಣ ಭಟ್ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪಕ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ ವಂದಿಸಿದರು ಸುಬ್ರಹ್ಮಣ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು.


Spread the love