ಅಂಬೇಡ್ಕರ್ ಕುರಿತು ಗಂಭೀರ ಚಿಂತನೆ ಅಗತ್ಯ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

Spread the love

ಅಂಬೇಡ್ಕರ್ ಕುರಿತು ಗಂಭೀರ ಚಿಂತನೆ ಅಗತ್ಯ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಉಡುಪಿ : ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವಿನ್ನು ಸಾಕಷ್ಟು ದೂರದ ಹಾದಿಯನ್ನು ಕ್ರಮಿಸಬೇಕಿದೆ; ಆದ್ದರಿಂದ ಅಂಬೇಡ್ಕರ್ ಅವರ ಕುರಿತು ಹಾಗೂ ಅವರ ಕೃತಿಗಳ ಕುರಿತು ಗಂಭೀರವಾಗಿ ಚಂತನೆ ನಡೆಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಅವರು ಶನಿವಾರ ಸಮಾಜ ಕಲ್ಯಾಣ ಇಲಖೆ ಹಾಗೂ ಸಮ್ಮೇಳನ ಆಯೋಜನಾ ಸಮಿತಿಯು, ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ಜಯಂತಿ ವರ್ಷಾಚರಣೆಯ ಅಂಗವಾಗಿ ಉತ್ತರ ಕನ್ನಡ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರಿಗೆ “ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ” ಅಂತರರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ 2 ದಿನಗಳ ವಿಭಾಗಮಟ್ಟದ ಕಾರ್ಯಾಗಾರದಲ್ಲಿ ಡೋಲು ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರ ಸಾಧನೆಯ ಕುರಿತು ಮಾಹಿತಿಯ ಕೊರತೆಯಿಂದ ಅವರ ಚಿಂತನೆಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ, ಅಂಬೇಡ್ಕರ್ ಅವರ ಕಲ್ಪನೆಯ ಸಾಮಾಜಿಕ ಬದಲಾವಣೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಬೇಕಿದೆ, ಅವರ ಕೃತಿಗಳ ಕುರಿತು ಸಮಾಜದ ಎಲ್ಲಾ ವರ್ಗಗಳ ಜನತೆ, ಶೋಷಿತ ಸಮುದಾಯ , ಮಾಧ್ಯಮಗಳು ಸೇರಿದಂತೆ ಎಲ್ಲರ ಜೊತೆ ವಿವರವಾದ ಚರ್ಚೆ, ಸಂವಾದ ನಡೆಯಬೇಕಿದೆ, ಅಂಬೇಡ್ಕರ್ ತಿಳಿಸಿದಂತೆ ನಮ್ಮ ಚಿಂತನೆಗಳು ಮತ್ತು ಬರವಣಿಗೆ ದೃಢವಾಗಿದ್ದರೆ ರಾಷ್ಟ್ರ ಸದೃಢವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಚಿಂತಕ ಜಿ.ರಾಜಶೇಖರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯಾ ನಂತರ ಹಲವು ವರ್ಷಗಳ ಕಾಲ ಅಂಬೇಡ್ಕರ್ ಅವರ ಸಾಧನೆಗಳನ್ನು ಗುರುತಿಸದ ರಾಜಕೀಯ ಪಕ್ಷಗಳು ಮತ್ತು ಎಲ್ಲಾ ಸಮುದಾಯಗಳು, ಪ್ರಸ್ತುತ ಅಂಬೇಡ್ಕರ್ ಅವರ ಕೊಡುಗೆಗಳನ್ನು ಗುರುತಿಸಿ ಅವರನ್ನು ಅರ್ಥ ಮಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ, ಅಂಬೇಡ್ಕರ್ ಅವರು ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ವರ್ಗಕ್ಕೆ ಸೇರದ ಪ್ರತಿಭಾನ್ವಿತ ದೇಶಪ್ರೇಮಿ. ಅವರು ಸಾರ್ವಜನಿಕ ಆಸ್ತಿ, ಅಸ್ಪøಶ್ಯತೆಯ ನೋವು ಅನುಭವಿಸಿ ಅದನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡ ಅಂಬೇಡ್ಕರ್ ಅವರನ್ನು , ಒಬ್ಬ ಸುಶಿಕ್ಷಿತ, ಹೋರಾಟಗಾರ, ಪತ್ರಕರ್ತ, ವಿಮೋಚನಾವಾದಿ, ಸಂವಿಧಾನ ರಚನೆಕಾರ ಈ ಎಲ್ಲಾ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಎನ್.ರಮೇಶ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವಲಯ ಸಂಚಾಲಕ ಸುಂದರ ಮಾಸ್ತರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್ , ಎಂಐಟಿ ಯ ಪ್ರಾಧ್ಯಾಪಕ ಫಣಿರಾಜ್ ಉಪಸ್ಥಿತರಿದ್ದರು.


Spread the love