ಮೀನುಗಾರರು ಜವಾಬ್ದಾರಿ ಮೆರೆದರೆ ಮಾತ್ರ ಮತ್ಸ್ಯ ಸಂರಕ್ಷಣೆ ಸಾಧ್ಯ – ಡಾ. ಪ್ರತಿಭಾ ರೋಹಿತ್

Spread the love

ಮೀನುಗಾರರು ಜವಾಬ್ದಾರಿ ಮೆರೆದರೆ ಮಾತ್ರ ಮತ್ಸ್ಯ ಸಂರಕ್ಷಣೆ ಸಾಧ್ಯ – ಡಾ. ಪ್ರತಿಭಾ ರೋಹಿತ್

ಮಂಗಳೂರು : ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದಲ್ಲಿ “ಜವಾಬ್ದಾರಿಯುತ ಮೀನುಗಾರಿಕೆ” ಕುರಿತ ಒಂದು ದಿನದ ವಿಜ್ಞಾನಿ – ಮೀನುಗಾರರ ನಡುವಿನ ಚಿಂತನ-ಮಂಥನ ಕಾರ್ಯಾಗಾರ ಇತ್ತೀಚೆಗೆ ಜರಗಿತು.

ಈ ಕಾರ್ಯಾಗಾರದಲ್ಲಿ ಮಲ್ಪೆ ಮತ್ತು ಮಂಗಳೂರಿನ ಯಾಂತ್ರೀಕೃತ ಮೀನುಗಾರಿಕೆ ನಡೆಸುವ ಸುಮಾರು 60 ಮೀನುಗಾರರು ಭಾಗವಹಿಸಿದ್ದರು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ವಿಶ್ರಾಂತ ಶಿಕ್ಷಣ ನಿರ್ದೇಶಕ ಡಾ. ಎಸ್.ಎಲ್.ಶಾನುಭೋಗ್ ಅವರು “ಯಾರು ಸಂಪನ್ಮೂಲಗಳನ್ನು ಬಳಸುತ್ತಾರೋ ಅವರೇ ಅವುಗಳನ್ನು ಸಂರಕ್ಷಿಸಬೇಕು” ಎನ್ನುವ ವಿಶ್ವ ಆಹಾರ ಸಂಸ್ಥೆಯ ಘೋಷವಾಕ್ಯವನ್ನು ನೆನೆಯುತ್ತಾ ಕರ್ನಾಟಕ ಕರಾವಳಿಯ ಎಲ್ಲಾ ಯಾಂತ್ರೀಕೃತ ಮೀನುಗಾರರು ಮಳೆಗಾಲದಲ್ಲಿನ ಜೂನ್ 1ರಿಂದ ಜುಲೈ 31 ರವರೆಗಿನ 61 ದಿನಗಳ ಮೀನುಗಾರಿಕೆ ನಿಷೇಧವನ್ನು ತಪ್ಪದೇ ಪಾಲಿಸಬೇಕು ಎಂದು ಕರೆಕೊಟ್ಟರು.

ದಿಕ್ಸೂಚಿ ಭಾಷಣ ಮಾಡಿದ ಮಂಗಳೂರಿನ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು ಹಾಗೂ ವಿಜ್ಞಾನಿ ಡಾ. ಪ್ರತಿಭಾ ರೋಹಿತ್ ಅವರು ಕರ್ನಾಟಕದ 72 ಜಾತಿಯ ಕಡಲ ಮೀನುಗಳ ಕಾನೂನಾತ್ಮಕ ಕನಿಷ್ಟ ಗಾತ್ರದ ಪರಿಚಯ ಮಾಡಿಕೊಟ್ಟರು. ಮೀನುಗಳು ಪ್ರೌಢಾವಸ್ಥೆ ತಲುಪುವ ಅವಧಿ ಆಧರಿಸಿ ಬಂಗಡೆ ಮೀನು 14ಸೆ.ಮೀ.ಗಿಂತ ಕಡಿಮೆ ಮತ್ತು ಬೂತಾಯಿ 10ಸೆ.ಮೀ. ಗಿಂತ ಕಡಿಮೆ ಗಾತ್ರದ ಚಿಕ್ಕ ಚಿಕ್ಕ ಮೀನುಗಳನ್ನು ಸಮುದ್ರದಿಂದ ಹಿಡಿದು ತರುವಂತಿಲ್ಲ. ಈ ನಿಟ್ಟಿನಲ್ಲಿ ಮೀನುಗಾರರು ಜವಾಬ್ದಾರಿವಹಿಸಿ ಮೀನುಗಾರಿಕೆ ನಡೆಸಿದರೆ ಮಾತ್ರ ಮತ್ಸ್ಯ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಮಲ್ಪೆಯ ಯುವ ಮೀನುಗಾರ ಯೋಗೀಶ್ ಸಾಲಿಯಾನ್ ಅವರು ತಯಾರಿಸಿದ “ಚಲ್ಟ್” ಎನ್ನುವ ವಿಡಿಯೋ ಪ್ರದರ್ಶನವನ್ನು ಮಾಡಲಾಯಿತು. ಚಿಕ್ಕ ಚಿಕ್ಕ ಮೀನುಗಳನ್ನು ಹಿಡಿದರೆ ಸಂಪನ್ಮೂಲಕ್ಕೆ ತಗಲುವ ಅಪಾರ ಹಾನಿ ಕುರಿತು ಆ ಮೂಲಕ ಮೀನುಗಾರರಿಗೆ ಮನವರಿಕೆ ಮಾಡಿಕೊಡಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಮೀನುಗಾರಿಕೆ ಉಪನಿರ್ದೇಶಕರುಗಳಾದ ಮಹೇಶ್ ಕುಮಾರ್, ಪಾಶ್ವನಾಥ್, ಮೀನುಗಾರಿಕೆ ಮಹಾವಿದ್ಯಾಲಯದ ಮತ್ಸ್ಯ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ನೂತನ ಮುಖ್ಯಸ್ಥರಾದ ಡಾ. ಎಸ್.ಎಂ. ಶಿವಪ್ರಕಾಶ್ ಭಾಗವಹಿಸಿದ್ದರು. ಅತಿಯಾದ ಮೀನುಗಾರಿಕೆಯಿಂದ ಸಂಪನ್ಮೂಲ ಹೇಗೆ ನಾಶವಾಗುವುದು ಎನ್ನುವುದರ ಬಗ್ಗೆ ಅರಿವು ಮೂಡಿಸುತ್ತಾ ಅಮೇರಿಕಾದ ಕ್ಯಾಲಿಫೋರ್ನಿಯಾ ಸಾರ್ಡಿನ್ (ಬೂತಾಯಿ ಜಾತಿಯ ಮೀನು) ಮೀನುಗಾರಿಕೆ 1930ರ ದಶಕದಲ್ಲಿ ಉಛ್ರಾಯ ಸ್ಥಿತಿಯಲ್ಲಿದ್ದ ಪರ್ಸಿನ್ ಮೀನುಗಾರಿಕೆ 1960ರ ದಶಕದಲ್ಲಿ ಸಂಪೂರ್ಣ ಪತನಗೊಂಡಿತ್ತು ಎಂದು ಡಾ. ಎಸ್. ಎಂ. ಶಿವಪ್ರಕಾಶ್ ಅವರು ವಿವರಿಸಿದರು. ಅಂತೆಯೇ ನಮ್ಮಲ್ಲೂ ಜವಾಬ್ದಾರಿಯುತವಾಗಿ ಮೀನುಗಾರಿಕೆ ನಡೆಸದೇ ಹೋದರೆ ಇಲ್ಲಿನ ಮತ್ಸ್ಯ ಸಂಪನ್ಮೂಲಕ್ಕೂ ಅದೇ ರೀತಿಯ ನಷ್ಟವಾಗುವ ಸಾಧ್ಯತೆ ಇದೆಯೆಂದು ಅವರು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ಡಾ. ಎಂ.ಎನ್. ವೇಣುಗೋಪಾಲ್ ಅವರು ಟ್ರಾಲ್ ಬಲೆಯ ಕಾಡ್ ಎಂಡ್‍ನಲ್ಲಿ ಕಣ್ಣಿನ ಗಾತ್ರವನ್ನು ಕಾನೂನಾತ್ಮಕ 35 ಮೀ.ಮೀ.ಗೆ ಹೆಚ್ಚಿಸಿದಾಗ ಮೀನು ಮರಿಗಳು ಬಲೆಯಿಂದ ತಪ್ಪಿಸಿಕೊಂಡು ನಂತರ ಅವು ದೊಡ್ಡದಾಗಿ ಬೆಳೆದು ಆಮೇಲೆ ಮೀನುಗಾರಗಿಗೆ ಹೆಚ್ಚಿನ ಲಾಭ ತಂದುಕೊಡುತ್ತವೆ ಮತ್ತು ಆ ಮೂಲಕ ಸಂಪನ್ಮೂಲದ ಸಂರಕ್ಷಣೆಯೂ ಆದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಾಗಾರದ ಸಂಯೋಜಕ ಡಾ. ಎಸ್.ಎಂ. ಶಿವಪ್ರಕಾಶ್ ಸ್ವಾಗತಿಸಿದರು ಮತ್ತು ಮತ್ಸ್ಯ ಸಂಪನ್ಮೂಲ ಹಾಗೂ ನಿರ್ವಹಣೆ ವಿಭಾಗದ ಪ್ರಾಧ್ಯಾಪಕ ಡಾ. ಹೆಚ್.ಎನ್. ಆಂಜನೇಯಪ್ಪ ವಂದಿಸಿದರು.


Spread the love