ಮೀನುಗಾರರ ಬಗ್ಗೆ ಸಚಿವ ವೆಂಕಟರಾವ್ ನಾಡಗೌಡರ್ ಹೇಳಿಕೆ ದುರಾದೃಷ್ಟಕರ- ಶಾಸಕ ಕಾಮತ್
ಸಚಿವಸ್ಥಾನದಲ್ಲಿ ಇರುವವರು ಗೌರವದಿಂದ ನಡೆದುಕೊಳ್ಳಬೇಕು. ಮಲ್ಪೆಯಲ್ಲಿ ಏಳು ಜನ ಮೀನುಗಾರರ ನಾಪತ್ತೆ ಪ್ರಕರಣದ ಬಗ್ಗೆ ರಾಜ್ಯ ಸರಕಾರದ ಸಚಿವರೊಬ್ಬರು ಉಡಾಫೆಯಿಂದ ಮಾತನಾಡಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ರಾಜ್ಯದ ಮೀನುಗಾರರು ಆಳಸಾಗರಕ್ಕೆ ಹೋದವರು ನಾಪತ್ತೆಯಾಗಿ ತಿಂಗಳಾಗುತ್ತಾ ಬಂದಿದೆ. ಅವರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ರಾಜ್ಯ ಮೀನುಗಾರಿಕಾ ಸಚಿವರ ಜವಾಬ್ದಾರಿ ಕೂಡ ದೊಡ್ಡದಿದೆ. ಆ ಬಗ್ಗೆ ಮಾಧ್ಯಮಗಳು ಮಾಹಿತಿ ಕೇಳಿದಾಗ ನಾವೇನು ಸಮುದ್ರಕ್ಕೆ ಇಳಿದು ಹುಡುಕಬೇಕಾ ಎಂದು ಕೇಳುವ ಮೂಲಕ ಸಚಿವರು ಮಲ್ಪೆಯ ಮೀನುಗಾರರ ನೋವಿನ ಮೇಲೆ ಬರೆ ಎಳೆದಿದ್ದಾರೆ. ಮೀನುಗಾರರು ಸ್ವಾವಲಂಬಿಗಳು. ಅವರು ಸಚಿವರನ್ನು ಕಾಯದೇ ತಾವೇ ಸಮುದ್ರಕ್ಕೆ ಇಳಿದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೇಂದ್ರದಿಂದ ರಕ್ಷಣಾ ಕಾರ್ಯದರ್ಶಿಗಳು ಕೂಡ ತಂಡವನ್ನು ಕಳುಹಿಸಿಕೊಟ್ಟಿದ್ದಾರೆ.
ಕರಾವಳಿಯಲ್ಲಿ ಜೆಡಿಎಸ್ ಗೆ ಜನ ಮತ ಕೊಡಲ್ಲ ಎನ್ನುವ ಕೋಪ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡರ್ ಅವರಲ್ಲಿ ಕಾಣುತ್ತಿದೆ. ಮಾನವೀಯ ನೆಲೆಯಲ್ಲಿ ನೋಡಬೇಕಾದ ಪ್ರಕರಣಗಳನ್ನು ಕೂಡ ರಾಜ್ಯದ ಸಮ್ಮಿಶ್ರ ಸರಕಾರದ ಮಂತ್ರಿಯೊಬ್ಬರು ರಾಜಕೀಯ ದೃಷ್ಟಿಯಲ್ಲಿ ನೋಡಿದ್ದು ವಿಷಾದಕರ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
            












