ಮುಂದುವರೆದ ಗಾಳಿ – ಮಳೆಗೆ ಉಡುಪಿ ಜಿಲ್ಲೆ ತತ್ತರ, ರಸ್ತೆಗುರುಳಿದ ಬೃಹತ್ ಮರ, ವಿದ್ಯುತ್ ಕಂಬಗಳು 

Spread the love

ಮುಂದುವರೆದ ಗಾಳಿ – ಮಳೆಗೆ ಉಡುಪಿ ಜಿಲ್ಲೆ ತತ್ತರ, ರಸ್ತೆಗುರುಳಿದ ಬೃಹತ್ ಮರ, ವಿದ್ಯುತ್ ಕಂಬಗಳು 

ಉಡುಪಿ: ಕಳೆದ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ಮರಗಳು ನೆಲಕ್ಕುರುಳಿ ಸಂಚಾರಕ್ಕೆ ಭಾರೀ ಅಡ್ಡಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಕಟಪಾಡಿ, ಉದ್ಯಾವರ, ಪಿತ್ರೋಡಿಯಲ್ಲಿ ಮಳೆರಾಯ ಅಬ್ಬರಿಸಿದ್ದು ಮನೆ, ಅಂಗಡಿ, ಬಸ್ ನಿಲ್ದಾಣದ ಮೇಲೆ ಮರಗಳು ಉರುಳಿದೆ.

ವಿಪರೀತ ಗಾಳಿ ಬೀಸಿದ್ದು ವಿದ್ಯುತ್ ತಂತಿಗಳು ತುಂಡಾಗಿ ನೆಲಕ್ಕೆ ಬಿದ್ದಿದೆ. ಮೆಸ್ಕಾಂ ಅಧಿಕಾರಿಗಳ ಮುಂಜಾಗೃತಾ ಕ್ರಮದಿಂದ ಭಾರೀ ಅನಾಹುತ ತಪ್ಪಿದೆ. ಕಳೆದ ರಾತ್ರಿ ಸುರಿದ ಸಿಡಿಲು ಮಳೆಗೆ ಹಿರಿಯಡ್ಕ, ಕಾಪು, ಅಲೆವೂರು ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಎರಡು ಮನೆಗಳ ಮೇಲೆ ಮರ ಉರುಳಿದೆ.

ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಉಡುಪಿ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ರಸ್ತೆಗೆ ಬಿದ್ದ ಮರಗಳನ್ನು ಗ್ರಾಮಸ್ಥರೇ ತೆರವು ಮಾಡಿದರು. ಗ್ರಾಮೀಣ ಭಾಗದಲ್ಲಿ ಕಳೆದ 48 ಗಂಟೆಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ.

ಉದ್ಯಾವರದ ಪೇಟೆಯಲ್ಲಿನ ಕಾಮತ್ ಹೋಟೆಲ್ ಬಳಿಯಿದ್ದ ಬೃಹತ್ ಮರವೊಂದು ರಸ್ತೆಗಡ್ಡವಾಗಿ ಉರುಳಿಬಿದ್ದಿದ್ದು, ಶಂಭುಕಲ್ಲು ದೇವಳದ ಬಳಿ ಹಾಗೂ ಪಿತ್ರೋಡಿಯಲ್ಲಿ ಮರಗಳು ಉರುಳಿವೆ. ಈ ನಡುವೆ ಮಳೆ ಅವಾಂತರದ ಹಿನ್ನಲೆಯಲ್ಲಿ ಉದ್ಯಾವರ ಪರಿಸರದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಉದ್ಯಾವರ, ಪಿತ್ರೋಡಿ ಭಾಗಗಳಿಗೆ ಶಾಸಕ ಲಾಲಾಜಿ ಆರ್ ಮೆಂಡನ್ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


Spread the love