ಮೇರಮಜಲು ಗ್ರಾಪಂ ಸದಸ್ಯ, ಪತ್ನಿ ಮೇಲೆ ತಲವಾರು ದಾಳಿ

ಮೇರಮಜಲು ಗ್ರಾಪಂ ಸದಸ್ಯ, ಪತ್ನಿ ಮೇಲೆ ತಲವಾರು ದಾಳಿ

ಬಂಟ್ವಾಳ: ಗ್ರಾಮ ಪಂಚಾಯತ್  ಸದಸ್ಯ ಹಾಗೂ ಆತನ ಪತ್ನಿಗೆ ತಂಡವೊಂದು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೇರಮಜಲು ಎಂಬಲ್ಲಿ ಶುಕ್ರವಾರ ಮುಂಜಾನೆ ವೇಳೆ ನಡೆದಿದೆ.

ಮೇರಮಜಲು ನಿವಾಸಿ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಮತ್ತು ಆತನ ಪತ್ನಿ ಶೋಭಾ ಅವರು ಗಾಯಗೊಂಡವರು ಎಂದು ತಿಳಿದುಬಂದಿದೆ.

ಮುಂಜಾನೆ ಸುಮಾರು 4 ಗಂಟೆಯ ವೇಳೆ ಈ ಘಟನೆ ನಡೆದಿದ್ದು ಎನ್ನಲಾಗಿದೆ.

ಗಂಭೀರ ಗಾಯಗೊಂಡ ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 ಮುಂಜಾನೆ 4 ಗಂಟೆಯ ವೇಳೆ ತಂಡವು ಮನೆಯ ಬಾಗಿಲು ಬಡಿದಿದ್ದು, ಬಾಗಿಲು ತೆರೆಯುತ್ತಿದ್ದಂತೆ ಮೂವರಿದ್ದ ತಂಡ ತಲವಾರಿನಿಂದ ಹಲ್ಲೆ ನಡೆಸಿದೆ ಎಂದು ಗಾಯಾಳು ಯೋಗೀಶ್ ಪ್ರಭು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಬಂಟ್ವಾಳ ಎ‌ಎಸ್ಪಿ ಸೈದುಲು ಅಡಾವತ್, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಗ್ರಾಮಾಂತರ ಎಸ್ಸೈ ಪ್ರಸನ್ನ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.