ಮೇ 19ರ ಬಂದ್‍ಗೆ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ಬೆಂಬಲ

Spread the love

ಮಂಗಳೂರು: ಜೀವನದಿ ನೇತ್ರಾವತಿ ಉಳಿವಿಗಾಗಿ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವ ಸಲುವಾಗಿ ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದರೂ ರಾಜ್ಯ ಸರಕಾರವು ಜಿಲ್ಲೆಯ ಜನರ ಅಳಲಿಗೆ ಸ್ಪಂದಿಸದೇ, ಜಿಲ್ಲೆಯ ಹೋರಾಟಗಾರರೊಂದಿಗೆ ಯಾವುದೇ ಸಭೆ, ಸಮಾಲೋಚನೆಯನ್ನೂ ಮಾಡದೇ ಯೋಜನೆಯನ್ನು ಮುಂದುವರಿಸುತ್ತಾ ತನ್ನ ದಬ್ಬಾಳಿಕೆಯನ್ನು ಪ್ರದರ್ಶಿಸುತ್ತಿದೆ. ಈಗಾಗಲೇ ನೇತ್ರಾವತಿ ನದೀ ಮೂಲಗಳೆಲ್ಲ ಸೊರಗಿದ್ದು, ಮಳೆಯ ಪ್ರಮಾಣವೂ ಕಡಿಮೆಯಾಗುತ್ತಿದ್ದು, ದ.ಕ. ಜಿಲ್ಲೆಯಲ್ಲಿ ನೀರಿನ ಸಮಸ್ಯೆಯು ವರ್ಷದಿಂದ ವರ್ಷಕ್ಕೆ ತೀವ್ರವಾಗುತ್ತಿದೆ. ಎತ್ತಿನಹೊಳೆ ಯೋಜನೆಯಾಗದೇ ಜಿಲ್ಲೆಯಲ್ಲಿ ಈ ರೀತಿ ನೀರಿನ ಸಮಸ್ಯೆಯಾಗುತ್ತಿದ್ದು ಒಂದು ವೇಳೆ ಎತ್ತಿನಹೊಳೆ ಯೋಜನೆ ಆದರೆ ದ.ಕ. ಜಿಲ್ಲೆಯಲ್ಲಿ ಬರಗಾಲ ಯಾವ ರೀತಿ ವ್ಯಾಪಿಸಬಹುದೆಂಬುದನ್ನು ಜಿಲ್ಲೆಯ ಜನರು ಮತ್ತು ಜನಪ್ರತಿನಿಧಿಗಳು ಊಹಿಸಬೇಕಾಗಿದೆ. ಈ ಜಿಲ್ಲೆಯ ಯಾವನೇ ಒಬ್ಬ ಜನಪ್ರತಿನಿಧಿಯೂ ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಜಿಲ್ಲೆಯ ಜನರ ಪರವಾಗಿ, ನೇತ್ರಾವತಿ ನದಿಯ ಪರವಾಗಿ ಮಾತನಾಡದೆ ಯೋಜನೆಯ ಪರ ವಹಿಸುತ್ತಾ ಜಿಲ್ಲೆಯ ಜನತೆಗೆ ವಂಚನೆ ಮಾಡುತ್ತಲೇ ಬಂದಿರುತ್ತಾರೆ. ರಾಜ್ಯ ಸರಕಾರ ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ನಿಲುವನ್ನು ಖಂಡಿಸಿ ಎತ್ತಿನಹೊಳೆ ಯೋಜನೆಯನ್ನು ತಡೆಯುವ, ವಿರೋಧಿಸುವ ಯಾವುದೇ ಹೋರಾಟಕ್ಕೂ ಜಿಲ್ಲೆಯ ಜನತೆ ಜಾತಿ, ಪಕ್ಷ, ಧರ್ಮವನ್ನು ನೋಡದೇ ಸಂಪೂರ್ಣ ಸಹಕಾರ, ಬೆಂಬಲ ನೀಡುವ ಅಗತ್ಯವಿದೆ.

ಮೇ 19ರಂದು ಎತ್ತಿನಹೊಳೆ ಯೋಜನೆಯ ವಿರುದ್ಧ ನಡೆಯಲಿರುವ ದ.ಕ. ಜಿಲ್ಲಾ ಬಂದ್‍ಗೆ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟವು ಸಂಪೂರ್ಣ ಬೆಂಬಲ ನೀಡುತ್ತಿದೆ. ದ. ಕ. ಜಿಲ್ಲೆಯ ಶಾಸಕರು, ಸಂಸದರು, ಸಚಿವರು, ವಿಧಾನ ಪರಿಷತ್ ಸದಸ್ಯರು ಜಿಲ್ಲೆಯ ಜನತೆಯ ಒಳಿತಿನ ದೃಷ್ಠಿಯಿಂದ ನೇತ್ರಾವತಿ ಹೋರಾಟದಲ್ಲಿ ಭಾಗಿಯಾಗಲಿ, ಭಾಗಿಯಾಗಲು ಸಾಧ್ಯವಿಲ್ಲದಿದ್ದಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ. ರಾಜೀನಾಮೆ ನೀಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ದ. ಕ. ಜಿಲ್ಲೆಯ ಜನತೆಯೇ ಇವರನ್ನು ಅಧಿಕಾರದಿಂದ ಕಿತ್ತೊಗೆಯುವಲ್ಲಿ ಕ್ರಿಯಾಶೀಲರಾಗಲಿರುವರು. ನೇತ್ರಾವತಿ ನದಿ ಮೂಲವಾಗಿರುವ ಕುದುರೆಮುಖದ ಎಳನೀರು ಬಂಗ್ರಬಲಿಕೆಯಿಂದ ಸುಬ್ರಹ್ಮಣ್ಯದ ಕುಮಾರಧಾರ ಪುಷ್ಪಗಿರಿವರೆಗಿನ ಅಡವಿ ಪ್ರದೇಶವನ್ನು `ನೇತ್ರಾವತಿ ನದಿ ಸಂರಕ್ಷಣಾ ಅರಣ್ಯವಲಯ’ ಅಂತ ಘೋಷಣೆ ಮಾಡಿ ನೇತ್ರಾವತಿ ನದಿಯನ್ನು ಶಾಶ್ವತವಾಗಿ ಉಳಿಸುವ ಪ್ರಯತ್ನವನ್ನು ಸರಕಾರವು ಮಾಡಬೇಕು. – – ರಾಜ್ಯ ಸರಕಾರವು ನೇತ್ರಾವತಿ ನದಿಯನ್ನು ಮತ್ತು ನೇತ್ರಾವತಿ ನದೀ ಮೂಲಗಳಿರುವ ಪಶ್ಚಿಮ ಘಟ್ಟವನ್ನು `ನೇತ್ರಾವತಿ ನದಿ ಸಂರಕ್ಷಣಾ ಅರಣ್ಯವಲಯ’ ಎಂಬುದಾಗಿ ಅನುಷ್ಠಾನ ಮಾಡುವವರೆಗೆ ತೀವ್ರವಾದ ಹೋರಾಟವನ್ನು ಮಾಡುವ ಅನಿವಾರ್ಯತೆ ಇದೆ.


Spread the love