ರಾಜ್ಯ ಸರಕಾರ ಮೊಗವೀರ ಸಮಾಜವನ್ನು ಕಡೆಗಣಿಸಿಲ್ಲ-ಕಿರಣ್ ಕುಮಾರ್ ಉದ್ಯಾವರ
ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಯಾವತ್ತೂ ಹಿಂದುಳಿದ ಶ್ರಮಜೀವಿಗಳಾದ ಮೊಗವೀರ ಸಮಾಜವನ್ನು ಕಡೆಗಣಿಸಿಲ್ಲ. ಕಾಂಗ್ರೆಸ್ ಸರಕಾರ ಇದ್ದ ಪ್ರತಿ ಸಂದರ್ಭದಲ್ಲೂ ನಮ್ಮ ಸಮಾಜದ ಅಭಿವೃದ್ಧಿಗಾಗಿ ಕೈಗೊಂಡ ಜನಪರ ಕಾರ್ಯಕ್ರಮ ನಮ್ಮ ಮುಂದೆ ಇದೆ ಎಂದು ಮೊಗವೀರ ಸಮುದಾಯದ ಯುವ ಮುಖಂಡ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕಿರಣ್ ಕುಮಾರ್ ಉದ್ಯಾವರ ಹೇಳಿದ್ದಾರೆ.
ಜಿಲ್ಲೆಯಾದ್ಯಂತ ಮತ್ತು ಕಾಪು ಕ್ಷೇತ್ರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮೊಗವೀರ ಬಾಂಧವರಿದ್ದು, ಇದೇ ಸರಕಾರದಲ್ಲಿ ಈ ಹಿಂದೆ ಕಾಪು ಶ್ರೀ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯು ಅಸ್ತಿತ್ವಕ್ಕೆ ಬಂದಾಗ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಸಮಾಜದ ಮುಖಂಡರುಗಳ ಅಭಿಪ್ರಾಯದಂತೆ ಶ್ರೀಧರ್ ಕಾಂಚನ್ರವರನ್ನು ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ನೇಮಕ ಮಾಡಿ, ಆದೇಶ ನೀಡಿದ್ದು ಎಲ್ಲಾ ಸಮಾಜ ಬಾಂಧವರಿಗೂ ತಿಳಿದ ವಿಚಾರವಾಗಿರುತ್ತದೆ. ತದನಂತರ ಶ್ರೀಧರ್ ಕಾಂಚನ್ರವರು ಅನಾರೋಗ್ಯದಿಂದ ದೈವಾಧೀನರಾಗಿದ್ದು, ಪ್ರಸ್ತುತ ತೆರವಾದ ಸ್ನಾನಕ್ಕೆ ಮೊಗವೀರ ಸಮಾಜದ ಸದಸ್ಯರನ್ನು ನಾಮ ನಿರ್ದೇಶನ ಮಾಡಬೇಕಿತ್ತು. ಇದು ನ್ಯಾಯಸಮ್ಮತವಾದ ವಿಚಾರವಾಗಿದೆ. ಹೊಸ ಮಾರಿಗುಡಿಯ ಜೀರ್ಣೋದ್ಧಾರದ ಕಾರ್ಯಕ್ರಮದಲ್ಲಿ ನಮ್ಮ ಸಮಾಜ ಬಾಂಧವರು ಸಕ್ರಿಯವಾಗಿ ಭಾಗವಹಿಸುವುದರ ಜೊತೆಗೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿರುತ್ತೇವೆ. ಆದರೆ ಕೆಲವು ಸ್ವಾಪಿತ ಹಿತಾಸಕ್ತಿಗಳು ತರಾತುರಿಯಲ್ಲಿ ಆಡಳಿತ ಪಕ್ಷದ ಓರ್ವ ವಿಧಾನ ಪರಿಷತ್ ಸದಸ್ಯ ಮತ್ತು ಕಾಪು ಕ್ಷೇತ್ರದ ಜನಪ್ರತಿನಿಧಿಯ ಒತ್ತಡದ ಮೇರೆಗೆ ಮೊಗವೀರ ಸಮಾಜದವರಿಗೆ ಸಿಗುವ ಸದಸ್ಯತ್ವವನ್ನು ವಂಚಿಸಿದ ಬಗ್ಗೆ, ಇಡೀ ಮೊಗವೀರ ಸಮಾಜವು ಖಂಡಿಸುತ್ತದೆ, ಹೊಸ ಮಾರಿಗುಡಿ ದೇವಸ್ಥಾನವು ಸರಕಾರದ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಇದು ಯಾರ ಆಸ್ತಿಯು ಅಲ್ಲ ಎನ್ನುವುದು ಸದಸ್ಯತನಕ್ಕೆ ಕುಮ್ಮಕ್ಕು ನೀಡಿದ ಜನಪ್ರತಿನಿಧಿಗೂ ಹಾಗೂ ಸದಸ್ಯತನ ಆದವರು ತಿಳಿಯುವುದು ಒಳಿತು. ಇದನ್ನು ಸರಿಪಡಿಸಿ ಮೊಗವೀರ ಸಮಾಜಕ್ಕೆ ಅವಕಾಶವನ್ನು ನೀಡಬೇಕಾದುದು ಇವರ ಕರ್ತವ್ಯ, ಅವಕಾಶ ನೀಡದಿದ್ದಲ್ಲಿ ಮುಂದಿನ ಹೋರಾಟವು ಅನಿವಾರ್ಯ ಎಂದು ತಿಳಿಸಿದ್ದಾರೆ.