ರಾಜ್ಯ ಸರ್ಕಾರ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದೆಯೇ? ಸರ್ಕಾರಕ್ಕೆ ಗವರ್ನರ್ ನೇರ ಪ್ರಶ್ನೆ

Spread the love

ಬೆಂಗಳೂರು: ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಹಾಗೂ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು, ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಎಂದಿರುವ ರಾಜ್ಯಪಾಲರು, ದೇಶದ ಬೆನ್ನೆಲುಬು ರೈತರ ಆತ್ಮಹತ್ಯೆಗೆ ಕಾರಣ ಏನು? ಆತ್ಮಹತ್ಯೆ ತಡೆಗೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಬಗ್ಗೆ ವಿವರ ಸಲ್ಲಿಸುವಂತೆ ಸಿದ್ದರಾಮಯ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.

1

ರೈತರ ಆತ್ಮಹತ್ಯೆ ಹಾಗೂ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ಸರ್ಕಾರಕ್ಕೆ ಮೂರು ಪುಟಗಳ ಪತ್ರ ಬರೆದಿರುವ ರಾಜ್ಯಪಾಲರು, ರೈತರ ಆತ್ಮಹತ್ಯೆ ವಿಚಾರಕ್ಕೆ ಹೇಗೆ ಸ್ಪಂದಿಸುತ್ತಿದ್ದೀರಿ ಎಂಬ ಬಗ್ಗೆ ವಿವರ ನೀಡುವಂತೆ ಸೂಚಿಸಿದ್ದಾರೆ.

ಈವರೆಗೆ ರಾಜ್ಯದಲ್ಲಿ ಎಷ್ಟು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಮತ್ತು ಆತ್ಮಹತ್ಯೆಗೆ ಮೀಟರ್ ಬಡ್ಡಿ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮೀಟರ್ ಬಡ್ಡಿ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮ ಏನು? ಎಲ್ಲದರ ಬಗ್ಗೆ ಸಂಪೂರ್ಣ ವಿವರ ಸಲ್ಲಿಸಿ ಎಂದು ಸೂಚಿಸಿದ್ದಾರೆ.

ಇನ್ನು ಲೋಕಾಯುಕ್ತ ಪ್ರಕರಣಗಳ ಕುರಿತು ಪ್ರಸ್ತಾಪಿಸಿರುವ ರಾಜ್ಯಪಾಲರು, ರಾಜ್ಯ ಸರ್ಕಾರ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದೆಯೇ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಭ್ರಷ್ಟ ಅಧಿಕಾರಿಗಳ ವಜಾಗೆ ಲೋಕಾಯುಕ್ತರು ಶಿಫಾರಸು ಮಾಡಿದ್ದಾರೆ, ಆದರೆ ಸರ್ಕಾರ ಸಂಪುಟ ಸಭೆಯ ಮೂಲಕ ಲೋಕಾಯುಕ್ತ ಸಂಸ್ಥೆಯ ಶಿಫಾರಸು ರದ್ದು ಮಾಡಿದ್ದು ಏಕೆ? ಅಧಿಕಾರಿಗಳ ಪರ ಸರ್ಕಾರ ನಿರ್ಣಯ ಕೈಗೊಂಡಿದ್ದೇಕೆ? ಅಧಿಕಾರಿಗಳನ್ನು ವಜಾ ಮಾಡಲು ನಿಮಗೆ ಸಮಸ್ಯೆ ಏನು? ಇಲ್ಲಿಯವರೆಗೆ ಯಾವ ಯಾವ ಅಧಿಕಾರಿಗಳನ್ನು ವಜಾ ಮಾಡಿದ್ದೀರಾ ಮತ್ತು ಯಾವ ಶಿಫಾರಸು ಪರಿಗಣಿಸಿ ವಜಾ ಮಾಡಿದ್ದೀರೆಂದು ತಿಳಿಸಿ ಎಂದಿದ್ದಾರೆ.

ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಜುಭಾಯಿ ವಾಲಾ ಅವರು, ಆರೋಪ ಪಟ್ಟಿ ಸಲ್ಲಿಕೆಗೆ ಅನುಮತಿ ನೀಡಲು ಹಿಂದೇಟು ಹಾಕುತ್ತಿರುವುದು ಏಕೆ? ಅನುಮತಿ ಕೇಳಿದ ಮೂರು ತಿಂಗಳಲ್ಲಿ ಅನುಮತಿ ನೀಡಬೇಕು. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇದೆ. ಆದರೆ ವರ್ಷಾನುಗಟ್ಟಲೆ ನೀವು ಅನುಮತಿ ನೀಡವುದಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗುವುದಿಲ್ಲವೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಐಎಎಸ್, ಐಪಿಎಸ್ ಸೇರಿ ವಿವಿಧ ಶ್ರೇಣಿಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಆದರೂ ಆರೋಪ ಪಟ್ಟಿ ಸಲ್ಲಿಕೆಗೆ ಅನುಮತಿ ನೀಡಲು ವಿಳಂಬವಾಗುತ್ತಿರುವುದು ಏಕೆ ? ಒಂದು ವಾರದೊಳಗೆ ಈ ಎಲ್ಲದರ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.


Spread the love