ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಐದನೇ ವರ್ಷದ 12ನೇ ಭಾನುವಾರದ ಸ್ವಚ್ಛ ಮಂಗಳೂರು ಶ್ರಮದಾನ 

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಐದನೇ ವರ್ಷದ 12ನೇ ಭಾನುವಾರದ ಸ್ವಚ್ಛ ಮಂಗಳೂರು ಶ್ರಮದಾನ 

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ವರ್ಷದ ಪ್ರಯುಕ್ತ ಆಯೋಜನೆ ಮಾಡಲಾಗುತ್ತಿರುವ ಕಾರ್ಯಕ್ರಮಗಳ 12ನೇ ಶ್ರಮದಾನವನ್ನು ದಿನಾಂಕ 24-2-2019 ಭಾನುವಾರ ಬೆಳಿಗ್ಗೆ 7-30 ರಿಂದ 10-30 ವರೆಗೆ ಮಣ್ಣಗುಡ್ಡ ಹಾಗೂ ಸ್ಟೇಟ್ ಬ್ಯಾಂಕ್ ಪರಿಸರಗಳಲ್ಲಿ ಕೈಗೊಳ್ಳಲಾಯಿತು.

ಮಣ್ಣಗುಡ್ಡೆಯಲ್ಲಿರುವ ಕೇಂದ್ರಿಯ ಉಗ್ರಾಣ ನಿಗಮದ ಬಳಿಯಲ್ಲಿ ಮನಪಾ ಸ್ಥಳಿಯ ಸದಸ್ಯೆ ಜಯಂತಿ ಆಚಾರ್ ಹಾಗೂ ಮನಪಾ ಸದಸ್ಯ ಪ್ರಕಾಶ್ ಸಾಲ್ಯಾನ್ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ಸಾಲ್ಯಾನ್ “ಅಪ್ರತಿಮ ಕಾಳಜಿ, ಪರಿಶ್ರಮ ಹಾಗೂ ನಿರಂತರತೆಯಿಂದಾಗಿ ಸ್ವಚ್ಛ ಮಂಗಳೂರು ಅಭಿಯಾನ ಇಂದು ಯಶಸ್ವಿಯಾಗಿ ನಗರದ ಸ್ವಚ್ಛತೆಯಲ್ಲಿ ಗಣನೀಯ ಪ್ರಮಾಣದ ಸಾಧನೆಯನ್ನು ಮಾಡಿದೆ. ನಾಲ್ಕೂವರೆ ವರ್ಷಗಳ ಹಿಂದೆ ಆರಂಭವಾದಾಗ ಇದ್ದ ಹುಮ್ಮಸ್ಸು ಕಿಂಚಿತ್ತೂ ಕಡಿಮೆಯಾಗದೆ ನೂರ್ಮಡಿಯಾಗಿರುವುದು ಇದರ ಯಶಸ್ಸಿಗೆ ಹಿಡಿದ ಕನ್ನಡಿ. ಅನೇಕ ಕಸಬೀಳುವ ತಾಣಗಳನ್ನು ಗುರುತಿಸಿ ಪುಟ್ಟ ಉದ್ಯಾನವನಗಳನ್ನಾಗಿಸಿ ಮತ್ತೆ ಜನರು ಅಲ್ಲಿ ಕಸ ಹಾಕದಂತೆ ತಡೆಯುವಲ್ಲಿ ಸ್ವಚ್ಛ ಮಂಗಳೂರು ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಇದೀಗ ಮಹಾನಗರ ಪಾಲಿಕೆಯೂ ಈ ಅಭಿಯಾನದೊಂದಿಗೆ ಕೈಜೋಡಿಸಿ ಜೊತೆ ಜೊತೆಯಾಗಿ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸ್ವಚ್ಛತೆಯಲ್ಲಿ ಮಂಗಳೂರನ್ನು ಮಾದರಿ ನಗರವನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಲಿದೆ. ಸಾರ್ವಜನಿಕರೂ ಈ ಕಾರ್ಯಕ್ಕೆ ಪೂರಕವಾಗಿ ಸ್ಪಂದಿಸುವಂತಾಗಲಿ ಎಂದು ಆಶಿಸುತ್ತೇನೆ” ಎಂದು ಹೇಳಿದರು. ಇದಕ್ಕೂ ಮುನ್ನ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಕಾರ್ಯಕರ್ತರಿಗೆ ಕಾರ್ಯಗಳನ್ನು ಹಂಚಿಕೆ ಮಾಡಿದರು. ಅನಿರುದ್ಧ ನಾಯಕ್, ಮೋಹನ್ ಕೊಟ್ಟಾರಿ, ಪ್ರವೀಣ ಶೆಟ್ಟಿ, ಉಮಾ ಪ್ರಸಾದ್ ಕಡೆಕಾರ್, ಸ್ಮಿತಾ ಶೆಣೈ ಹಾಗೂ ಇನ್ನಿತರ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆರು ತಂಡಗಳಿಂದ ಸ್ವಚ್ಛತಾ ಕಾರ್ಯ: ಮಣ್ಣಗುಡ್ಡೆಯಲ್ಲಿರುವ ಕೇಂದ್ರಿಯ ಉಗ್ರಾಣದ ಕೂಡು ರಸ್ತೆಯ ನಾಲ್ಕು ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಮಣ್ಣಗುಡ್ಡೆಯತ್ತ ಸಾಗುವ ಎಂ. ಲೋಕಯ್ಯ ಶೆಟ್ಟಿ ಮಾರ್ಗದ ಬದಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ ಧನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಸ್ವಚ್ಛಗೊಳಿಸಿದರು. ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಪ್ರಾಧ್ಯಾಪಕಿಯರಾದ ರೇಖಾ ಎಸ್ ಎನ್ ಹಾಗೂ ಮೋಹಿನಿ ಇವರುಗಳ ನೇತೃತ್ವದಲ್ಲಿ ಉಗ್ರಾಣ ರಸ್ತೆಗಳನ್ನು ಗುಡಿಸಿ ಶುಚಿಮಾಡಿದರು. ಸಂತ ಅಲೋಶಿಯೆಸ್ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಮಣ್ಣಗುಡ್ಡೆಯಿಂದ ಲಾಲಭಾಗ್ ನತ್ತ ತೆರಳುವ ದಾರಿಯ ಬದಿಗಳನ್ನು ಪ್ರಾಧ್ಯಾಪಕರಾದ ಕಿಶೋರ್‍ಚಂದ್ರ ನೇತೃತ್ವದಲ್ಲಿ ಸ್ವಚ್ಛ ಮಾಡಿದರು. ಅಭಿಯಾನದ ಹಿರಿಯ ಕಾರ್ಯಕರ್ತರು ಕೇಂದ್ರ ಉಗ್ರಾಣ ವೃತ್ತದ ಬಳಿ ತ್ಯಾಜ್ಯದಿಂದ ತುಂಬಿದ್ದ ತೋಡುಗಳಲ್ಲಿದ್ದ ಮಣ್ಣು ಗಿಡಗಂಟಿಗಳನ್ನು ತೆರವುಗೊಳಿಸಿದರು. ಮತ್ತೊಂದು ಬದಿಯಲ್ಲಿ ಪ್ರೀತಮ್ ಮುಗಿಲ್, ವಿಖ್ಯಾತ ಮತ್ತಿತರ ಕಾರ್ಯಕರ್ತರು ಅನೇಕ ದಿನಗಳಿಂದ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಲ್ಲು ಮಣ್ಣುಗಳ ಬೃಹತ್ ರಾಶಿಗಳನ್ನು ಜೆ.ಸಿ.ಬಿ ಟಿಪ್ಪರ ಬಳಸಿ ತೆಗೆದು, ಜಾಗೆಯನ್ನು ಹಸನುಗೊಳಿಸಿದರು. ಅಲ್ಲದೇ ಅಲ್ಲಿ ಕೊಳೆಯಿಂದ ತುಂಬಿಕೊಂಡಿದ್ದ ಬಸ್ ತಂಗುದಾಣವನ್ನು ಸ್ವಚ್ಚಗೊಳಿಸಿ ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡಿದರು. ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಎಲ್ಲ ತಂಡಗಳ ಉಸ್ತುವಾರಿ ವಹಿಸಿಕೊಂಡಿದ್ದರು.

ಸರ್ವೀಸ್ ಬಸ್ ನಿಲ್ದಾಣದಲ್ಲಿ ಶ್ರಮದಾನ: ಕಳೆದ ಎರಡು ವಾರಗಳಿಂದ ಸರ್ವೀಸ್ ಬಸ್ ನಿಲ್ದಾಣದಲ್ಲಿ ಶ್ರಮದಾನ ಮಾಡಲಾಗಿತ್ತಾದರೂ ಉಳಿದ ಕೆಲಸವನ್ನು ಪೂರ್ಣಗೊಳಿಸಬೇಕೆಂದು ಈ ಬಾರಿಯೂ ಅಲ್ಲಿ ಶ್ರಮದಾನ ನಡೆಸಿದರು. ಕಳೆದ ವಾರದಂತೆ ಇಂದೂ ಸಹ ಅಲ್ಲಿ ಕುಳಿತುಕೊಳ್ಳಲು ಆಸನಗಳನ್ನು ಅಳವಡಿಸಲಾಯಿತು. ಎಸ್.ವಿ.ಎಸ್ ವಿದ್ಯಾರ್ಥಿಗಳು ಕಂಬಗಳನ್ನು ಶುಚಿ ಮಾಡಿ ಬಣ್ಣ ಬಳಿದು ಸುಂದರ ಮಾಡಿದರು. ಉದಯ ಕೆಪಿ, ಕಿರಣ ಫರ್ನಾಂಡಿಸ್ ಮುಂದಾಳತ್ವ ವಹಿಸಿದರು. ಇಲ್ಲಿಯವರೆಗೆ ಒಟ್ಟು 100 ಲೀಟರ್ ಪೇಂಟ್ ಬಳಸಿಕೊಳ್ಳಲಾಗಿದ್ದು, ಪ್ರಯಾಣಿಕರಿಗಾಗಿ 40 ಕುಳಿತುಕೊಳ್ಳುವ ಅಸನಗಳನ್ನು ಅಳವಡಿಸಿ, ಕಸದ ಬುಟ್ಟಿ ಹಾಗೂ ಹೂಕುಂಡಗಳನ್ನು ಅಲ್ಲಿಡಲಾಗಿದೆ. ಅಲ್ಲದೇ ಕಳೆದ ಒಂದು ವಾರದಿಂದ ಪ್ರತಿನಿತ್ಯ ಕಾರ್ಯಕರ್ತರ ಜಾಗೃತಿ ಕಾರ್ಯದಿಂದಾಗಿ ತ್ಯಾಜ್ಯ ಬೀಳುತ್ತಿದ್ದ ಎರಡು ಸ್ಥಳಗಳು ಇಂದು ತ್ಯಾಜ್ಯ ಮುಕ್ತವಾಗಿ ಕಂಗೊಳಿಸುತ್ತಿವೆ. ಸುಧೀರ್ ನರೋಹ್ನ, ಪುನೀತ್ ಪೂಜಾರಿ, ಜಗನ್ ಕೋಡಿಕಲ್, ಸತೀಶ್ ಇನ್ನಿತರರು ವಾರವಿಡೀ ಸ್ಥಳದಲ್ಲಿದ್ದು ಕಾರ್ಯನಿರ್ವಹಿಸಿದರು.

ಸ್ವಚ್ಛ ಸೋಚ್: 16 ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳು : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾಗಿ ನಗರದ ವಿವಿಧ ಈ ತಿಂಗಳಲ್ಲಿ ಕಾಲೇಜುಗಳಲ್ಲಿ ಸ್ವಚ್ಛ ಸೋಚ್ ಸೆಮಿನಾರ್‍ಗಳನ್ನು ಹಮ್ಮಿಕೊಳ್ಳಲಾಯಿತು. ಎಸ್.ಡಿ.ಎಂ ಮೆನೇಜಮೆಂಟ್ ಕಾಲೇಜು, ಕಟೀಲು ದುರ್ಗಾಪರಮೇಶ್ವರಿ ಕಾಲೇಜು, ಡಾ. ಎಂ ವಿ ಶೆಟ್ಟಿ ಕಾಲೇಜು, ಮೂಲ್ಕಿ ವಿಜಯಾ ಕಾಲೇಜು, ಕೆನರಾ ಕಾಲೇಜು, ಎಸ್ ಡಿ ಎಮ್ ಕಾನೂನು ಮಹಾವಿದ್ಯಾಲಯ, ಸಂತ ಅಲೋಶಿಯೆಸ್ ಕೈಗಾರಿಕಾ ತರಬೇತಿ ಕಾಲೇಜು, ಮಹಿಳಾ ಕಾಲೇಜು ಬಲ್ಮಠ, ವಾಮದಪದವು ಪ್ರಥಮ ದರ್ಜೆ ಕಾಲೇಜು, ಎಸ್.ವಿ.ಎಸ್ ಕಾಲೇಜು ಬಂಟ್ವಾಳ, ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತ ಅಲೋಶಿಯೆಸ್ ಕಾಲೇಜು ಮಂಗಳೂರು ಹಾಗೂ ಸಿಟಿ ನರ್ಸಿಂಗ್ ಕಾಲೇಜು ಸೇರಿದಂತೆ ಇಂದಿನ ವರೆಗೆ ಒಟ್ಟು 22 ವಿಚಾರ ಸಂಕಿರಣಗಳನ್ನು ನಡೆಸಲಾಗಿದೆ. ವಿಚಾರ ಸಂಕಿರಣಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಚರ್ಚೆ, ಸಂವಾದ, ಪ್ರತಿಜ್ಞಾವಿಧಿ ಬೋಧನೆ ಹಾಗೂ ಮಡಕೆ ಗೊಬ್ಬರ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಪೆÇ್ರೀ. ರಾಜಮೋಹನ್ ರಾವ್, ಗೋಪಿನಾಥ್ ರಾವ್ ಹಾಗೂ ಡಾ. ನಿವೇದಿತಾ, ರಜೀನಾ ದಿನೇಶ್, ಪೆÇ್ರೀ. ಭಾರತಿ ಭಟ್, ಸುರೇಶ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಸ್ವಚ್ಛ ಸೋಚ್ ಅಭಿಯಾನದ ಮುಖ್ಯ ಸಂಯೋಜಕ ರಂಜನ್ ಬೆಳ್ಳರಪಾಡಿ ವಿಚಾರ ಸಂಕಿರಣಗಳನ್ನು ಸಂಘಟಿಸಿದರು. ಗುರುಪ್ರಸಾದ್ ರಾವ್ ಹಾಗೂ ಶ್ರೀವತ್ಸ ನಿರ್ಚಾಲು ಸಂಯೋಜಿಸಿದರು. ಎಂ.ಆರ್.ಪಿ.ಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆಗಳು ಸಂಸ್ಥೆ ಈ ಅಭಿಯಾನಗಳಿಗೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.


Spread the love