ರಿಕ್ಷಾಕ್ಕೆ ಲಾರಿ ಢಿಕ್ಕಿ ; ಎಕ್ಕೂರಿನ ಕೇಂದ್ರಿಯ ವಿದ್ಯಾಲಯದ   ಶಿಕ್ಷಕಿ ಬಲಿ

ರಿಕ್ಷಾಕ್ಕೆ ಲಾರಿ ಢಿಕ್ಕಿ ; ಎಕ್ಕೂರಿನ ಕೇಂದ್ರಿಯ ವಿದ್ಯಾಲಯದ   ಶಿಕ್ಷಕಿ ಬಲಿ

ಮಂಗಳೂರು: ಲಾರಿಯೊಂದು ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆದು ತಳ್ಳಿಕೊಂಡು ಹೋದ ಪರಿಣಾಮ ಶಿಕ್ಷಕಿಯೊಬ್ಬರು ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಕದ್ರಿ ಕಂಬಳದಲ್ಲಿ ರವಿವಾರ ನಡೆದಿದೆ.

ನಗರದ ಬಿಜೈ ನಿವಾಸಿ ಶೈಲಜಾ ರಾವ್ (55) ಮೃತ ಶಿಕ್ಷಕಿ. ರಿಕ್ಷಾ ಚಾಲಕ ವಿನೋದ್ (40) ಗಾಯಾಳು.

ಶೈಲಜಾ ಎಕ್ಕೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ಕಳೆದ 22 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ಅವರು ಪಣಂಬೂರಿನ ಕೇಂದ್ರಿಯ ವಿದ್ಯಾಲಯ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಲಾರಿ ಚಾಲಕನು ಕದ್ರಿಯ ಭಾರತ್ ಬೀಡಿ ಜಂಕ್ಷನ್ ಕಡೆಯಿಂದ ಕದ್ರಿ ಕಂಬಳದ ಕಡೆಗೆ ವೇಗವಾಗಿ ಹಾಗೂ ಅಪಾಯಕಾರಿಯಾಗಿ ಲಾರಿ ಚಲಾಯಿಸಿಕೊಂಡು ಬರುತ್ತಿದ್ದನು. ಇದಕ್ಕೆ ಅಡ್ಡಲಾಗಿ ಕದ್ರಿ ಕಂಬಳ ಜಂಕ್ಷನ್‌ನಲ್ಲಿ ಆಟೊವೊಂದು ಪಿಯೊ ಮಾಲ್ ಕಡೆಗೆ ತಿರುಗುವುದನ್ನು ಕಂಡ ಲಾರಿ ಚಾಲಕನು ತೀರಾ ಬಲಭಾಗಕ್ಕೆ ಲಾರಿ ಚಲಾಯಿಸಿ ಮುಂದೆ ಸಾಗಿದ್ದಾನೆ. ಬಟ್ಟಗುಡ್ಡ ಕಡೆಯಿಂದ ಭಾರತ್ ಬೀಡಿ ಜಂಕ್ಷನ್ ಕಡೆಗೆ ಬರುತ್ತಿದ್ದ ಆಟೊರಿಕ್ಷಾಕ್ಕೆ ಲಾರಿ ಢಿಕ್ಕಿ ಹೊಡೆದಿದೆ.  ರಿಕ್ಷಾದಲ್ಲಿದ್ದ ಶಿಕ್ಷಕಿ ಶೈಲಜಾ ಅಪಘಾತ ಸಂಭವಿಸಿದ ಸ್ಥಳದಿಂದ ಸುಮಾರು 50 ಮೀಟರ್ ದೂರದಲ್ಲಿ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಶಿಕ್ಷಕಿಗೆ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿತ್ತು. ಅಲ್ಲದೆ, ರಿಕ್ಷಾದಲ್ಲಿದ್ದ ಚಾಲಕನು ಸ್ವಲ್ಪ ದೂರ ಕ್ರಮಿಸಿ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಶಿಕ್ಷಕಿ ಶೈಲಜಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಚಾಲಕ ವಿನೋದ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆಯಲ್ಲಿ ಅಪಘಾತಕ್ಕೀಡಾದ ಆಟೊರಿಕ್ಷಾವು ಸಂಪೂರ್ಣ ನಜ್ಜುಗುಜ್ಜಾಗಿದೆ.

ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.