ರೌಡಿಶೀಟರ್ ಆಕಾಶಭವನ ಶರಣ್‌ ಕಾಲಿಗೆ ಗುಂಡೇಟು; ಶೂಟೌಟ್‌ನಲ್ಲಿ ಹೆಡ್ ಕಾನ್‌ಸ್ಟೇಬಲ್‌ಗೂ ಗಾಯ

Spread the love

ರೌಡಿಶೀಟರ್ ಆಕಾಶಭವನ ಶರಣ್‌ ಕಾಲಿಗೆ ಗುಂಡೇಟು; ಶೂಟೌಟ್‌ನಲ್ಲಿ ಹೆಡ್ ಕಾನ್‌ಸ್ಟೇಬಲ್‌ಗೂ ಗಾಯ

ಚೇಸ್ ಮಾಡಿದ್ದ ಪೊಲೀಸರು ; ತಪ್ಪಿಸ್ಕೊಂಡು ಬಂದಿದ್ದ ರೌಡಿ ಶರಣ್ ಸಿಕ್ಕಿಬಿದ್ದಿದ್ದೇ ರೋಚಕ, ಪೇದೆ ಮೇಲೆ ಚೂರಿಯಿಂದ ಹಲ್ವೆ ಫೈರ್ ಮಾಡಿದ್ದ ಸಿಸಿಬಿ ಎಸ್‌ಐ

ನಟೋರಿಯಸ್ ರೌಡಿ ಆಕಾಶಭವನ್ ಶರಣ್ ಬೆನ್ನು ಬಿದ್ದಿದ್ದ ಮಂಗಳೂರಿನ ಸಿಸಿಬಿ ಪೊಲೀಸರು ಆತನನ್ನು ಕಡೆಗೂ ಬಲೆಗೆ ಹಾಕಿದ್ದು ರೋಚಕ ಮಿಸ್ಟರಿ. ಮೂರು ದಿನಗಳ ಹಿಂದೆ ಕಾವೂರಿನಲ್ಲಿ ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೆಯೇ ಕಾರು ಹಾಯಿಸಿದ್ದ ರೌಡಿಯನ್ನು ಬಂಧಿಸಲೇಬೇಕೆಂದು ಪೊಲೀಸರು ಬೆನ್ನು ಬಿದ್ದಿದ್ದರು. ಕೊನೆಗೆ, ಮಲ್ಪೆಯಲ್ಲಿ ಅಡಗಿದ್ದಾನೆಂಬ ಮಾಹಿತಿ ಪಡೆದು ಅಲ್ಲಿಂದ ಚೇಸಿಂಗ್ ಮಾಡಿಕೊಂಡು ಬಂದು ಕಡೆಗೂ ಮಂಗಳೂರಿನಲ್ಲಿ ಅಡ್ಡಹಾಕಿ ಬಂಧಿಸಿದ್ದಾರೆ.

.ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನ‌ರ್ ಅನುಪಮ್ ಅಗರ್ವಾಲ್ ಒಟ್ಟು ಪ್ರಕರಣದ ಪಿನ್ ಟು ಪಿನ್ ಮಾಹಿತಿಯನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ಎರಡು ಜಿಲ್ಲೆಯಲ್ಲಿ ಆತನ ಮೇಲೆ ಸುಮಾರು 25ಕ್ಕೂ ಹೆಚ್ಚು ಕೇಸುಗಳಿವೆ. ಜೈಲಿನಲ್ಲಿ ಕೊಲೆಯತ್ನ ಸುಳ್ಯದ ಕೊಲೆ ಪ್ರಕರಣ ಸೇರಿದಂತೆ ಕೊಲೆ, ಕೊಲೆಯತ್ನ ಸೇರಿ 20ಕ್ಕೂ ಹೆಚ್ಚು ಪ್ರಕರಣ ಮಂಗಳೂರಿನಲ್ಲೇ ಇವೆ. ಹಲವಾರು ಪ್ರಕರಣಗಳಲ್ಲಿ ಅರೆಸ್ಟ್ ವಾರೆಂಟ್ ಇತ್ತು. ಹೀಗಾಗಿ 15 ದಿನಗಳಿಂದ ಶರಣ್ ಬಂಧನ ಮಾಡುವುದಕ್ಕಾಗಿ ನಮ್ಮ ಪೊಲೀಸರು ಹಿಂದೆ ಬಿದ್ದಿದ್ದರು.

ಮೂರು ದಿನಗಳ ಹಿಂದೆ ಕಾವೂರಿನಲ್ಲಿ ಅಪಾರ್ಟೆಂಟ್ ನಲ್ಲಿದ್ದ ಮಾಹಿತಿ ಅರಿತು ಬಂಧನಕ್ಕೆ ಬಲೆ ಬೀಸಿದ್ದರು. ಆ ಸಂದರ್ಭದಲ್ಲಿ ಪೊಲೀಸರ ಮೇಲೆ ಕಾರು ಹಾಯಿಸಿ ಪರಾರಿಯಾಗಿದ್ದ ಬಗ್ಗೆ ಕಾವೂರಿನಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಈ ನಡುವೆ, ಆತನಿಗೆ ಯಾರೆಲ್ಲ ಸಪೋರ್ಟ್ ಮಾಡಿದ್ದಾರೆಂದು ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಶರತ್ ಭಂಡಾರಿ, ಮಯೂರಿ, ನೀಲಾ ಮತ್ತಿತರರನ್ನು ವಶಕ್ಕೆ ಪಡೆದು ಮಾಹಿತಿ ಪಡೆಯಲಾಗಿತ್ತು. ಮಲ್ಪೆಯಲ್ಲಿ ಮನೆಯೊಂದರಲ್ಲಿ ಅಡಗಿದ್ದಾನೆಂದು ಮಾಹಿತಿ ತಿಳಿದು ಇಂದು ಬೆಳಗ್ಗೆ ಸಿಸಿಬಿ ಎಸ್‌ಐ ಸುದೀಪ್ ಮತ್ತು ಶರಣಪ್ಪ ಅವರ ತಂಡ ಉಡುಪಿಗೆ ತೆರಳಿತ್ತು.

ಪೊಲೀಸರು ಮಲ್ಪೆ ತಲುಪಿದಾಗ ಶರಣ್ ತಪ್ಪಿಸಿಕೊಂಡಿದ್ದ ಆಶ್ರಯ ಕೊಟ್ಟಿದ್ದ ಮಂಜೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಿಳಿ ಐ20 ಕಾರಿನಲ್ಲಿ ಪರಾರಿಯಾಗಿರುವುದು ತಿಳಿದುಬಂದಿತ್ತು. ಟೋಲ್ ಗೇಟ್ ನಲ್ಲಿ ಚೆಕ್ ಮಾಡಿದಾಗ ಮಂಗಳೂರಿಗೆ ಬಂದಿರುವುದು ತಿಳಿದು ಪೊಲೀಸರು ಬೆನ್ನತ್ತಿ ಬಂದಿದ್ದರು. ಪಂಪೈಲ್ ನಲ್ಲಿ ಐ20 ಕಾರಿನಲ್ಲಿ ಒಬ್ಬಂಟಿಯಾಗಿ ಕಂಕನಾಡಿ ಕಡೆಗೆ ಎಸ್ಕೆಪ್ ಆಗಿರುವುದು ತಿಳಿದು ಚೇಸ್ ಮಾಡಲಾಗಿತ್ತು. ಜೆಪ್ಪು ಕುದ್ದಾಡಿಯಲ್ಲಿ ನಮ್ಮ ಪೊಲೀಸ್ ತಂಡ ಖಾಸಗಿ ಕಾರಿನಲ್ಲಿ ಆತನನ್ನು ಅಡ್ಡಹಾಕಿತ್ತು. ಕುದ್ದಾಡಿಯಲ್ಲಿ ಡೆಡ್ ಎಂಡ್ ಆಗಿದ್ದರಿಂದ ಯು ಟರ್ನ್ ಪಡೆಯುತ್ತಲೇ ಪೊಲೀಸರು ಸುತ್ತುವರಿದಿದ್ದಾರೆ. ಅಷ್ಟರಲ್ಲಿ ತನ್ನ ಕೈಲಿದ್ದ ಚೂರಿಯನ್ನು ತೋರಿಸಿ ಎಸ್ಕೆಪ್ ಆಗಲು ಯತ್ನಿಸಿದ್ದಾನೆ. ನಮ್ಮ ತಂಡದ ಪ್ರಕಾಶ್ ಎಂಬ ಪೇದೆಯ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಸಿಸಿಬಿ ಎಸ್‌ಐ ಸುದೀಪ್ ಅವರು ಕಾಲಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ. ಪ್ರಕಾಶ್ ಅವರನ್ನೂ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಶರಣ್ ಕಾಲಿಗೆ ಗಾಯಗೊಂಡಿದ್ದು ಅಪಾಯ ಏನೂ ಆಗಿಲ್ಲ ಎಂದು ಪೊಲೀಸ್ ಕಮಿಷನ‌ರ್ ತಿಳಿಸಿದ್ದಾರೆ.

ಆಕಾಶಭವನ್ ಶರಣ್ ಮಂಗಳೂರಿನ ನಟೋರಿಯಸ್ ರೌಡಿಯಾಗಿದ್ದು, 25ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದಾನೆ. ಹಲವು ಕೇಸುಗಳಲ್ಲಿ ಅರೆಸ್ಟ್ ವಾರೆಂಟ್ ಇದ್ದರೂ ಒಂಟಿ ತೋಳದ ರೀತಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಸುಳ್ಯದ ಕೆವಿಜಿ ಆಡಳಿತಾಧಿಕಾರಿಯ ಕೊಲೆ ಪ್ರಕರಣದಲ್ಲಿ ಈತನ ಮೇಲಿನ ಆರೋಪ ಸಾಬೀತಾಗಿದ್ದು, ದೋಷಿಯೆಂದು ಕೋರ್ಟ್ ತೀರ್ಪು ನೀಡಿದೆ. ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದರಿಂದ ಶಿಕ್ಷೆಯಿಂದ ಪಾರಾಗಿದ್ದಾನೆ. ಮಂಗಳೂರಿನಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಪರವಾಗಿ ಹಫ್ತಾ ವಸೂಲಿ ಮಾಡುತ್ತಿದ್ದಾನೆ ಎಂದು ಹೇಳಲಾಗಿತ್ತು. ಈ ಬಗ್ಗೆ ಕಮಿಷನ‌ರ್ ಬಳಿ ಕೇಳಿದಾಗ, ಅಂಡರ್ ವರ್ಲ್ಡ್ ಸಂಪರ್ಕ ಇರುವ ಮಾಹಿತಿ ಇದೆ. ಆ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ


Spread the love