ರೌಡಿ ಶೀಟರ್ ಗಳನ್ನು ಬಿಜೆಪಿಗರು ಮಹಾನ್ ದೇಶಭಕ್ತರು ಎಂಬಂತೆ ಬಿಂಬಿಸುವುದೇಕೆ? – ಮಂಜುನಾಥ ಭಂಡಾರಿ

.
Spread the love

ರೌಡಿ ಶೀಟರ್ ಗಳನ್ನು ಬಿಜೆಪಿಗರು ಮಹಾನ್ ದೇಶಭಕ್ತರು ಎಂಬಂತೆ ಬಿಂಬಿಸುವುದೇಕೆ? – ಮಂಜುನಾಥ ಭಂಡಾರಿ

ಮಂಗಳೂರು: ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಶೀಟರ್ ಗಳನ್ನು ಕೊಂದರೆ ಬಿಜೆಪಿಯವರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ. ಕೊಲೆ ಕೊಲೆಯತ್ನ ದರೋಡೆಯಲ್ಲಿ ಭಾಗಿಯಾದ ರೌಡಿಗಳು ಜೈಲಿನಿಂದ ಬಿಡುಗಡೆಯಾಗುವಾಗ ಹಾರ ತುರಾಯಿ ಹಾಕಿ ಸ್ವಾಗತಿಸುತ್ತಾರೆ. ಒಂದು ವೇಳೆ ವೈಯಕ್ತಿಕ ವೈಷಮ್ಯಕ್ಕೆ ಅಥವಾ ವಿರೋಧಿ ರೌಡಿ ಪಡೆಯಿಂದ ಸಾವಿಗೀಡಾದರೆ ಅವರನ್ನು ಹಿಂದೂನಾಯಕ, ಮಹಾನ್ ದೇಶಭಕ್ತ ಎಂಬಂತೆ ಬಿಂಬಿಸುವುದೇಕೆ?“ ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.

.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಅವರು, ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯ, ಘರ್ಷಣೆಯಿಂದಾಗಿ ಮಂಗಳೂರಿನ ಮಾನ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈ ಹಿಂದೆ ಪಬ್ ದಾಳಿ, ಚರ್ಚ್ ದಾಳಿ, ಬರ್ತ್ ಡೇ ಪಾರ್ಟಿ ದಾಳಿಯಿಂದ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಾಗಿದೆ. ಮಂಗಳೂರು ಬದಲಾವಣೆಯತ್ತ ತೆರೆದುಕೊಳ್ಳುತ್ತಿರುವ ಈ ವೇಳೆಯಲ್ಲಿ ಇಂತಹ ಘಟನೆಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗಿದೆ“ ಎಂದರು.

ಬಿಜೆಪಿಯವರು ಕೆಲವು ತಿಂಗಳ ಹಿಂದೆ ಬಂಟ್ವಾಳದಲ್ಲಿ ಬಾಲಕನೊಬ್ಬ ನಾಪತ್ತೆಯಾದಾಗ ಅದರಲ್ಲಿ ಅನ್ಯಕೋಮಿನ ಕೈವಾಡ ಎಂದು ಹಿರಿಕಿರಿಯ ನಾಯಕರೆಲ್ಲರೂ ಮನೆಗೆ ಭೇಟಿಕೊಟ್ಟು ಪ್ರಕಾರಣದ ದಿಕ್ಕು ತಪ್ಪಿಸಲು ಯತ್ನಿಸಿ ವಿಫಲರಾದರು. ನಾಪತ್ತೆಯಾದ ಬಾಲಕ ವಾಪಸ್ ಮನೆಗೆ ಬಂದಾಗ ಇವರ್ಯಾರು ಕೂಡಾ ಇರಲಿಲ್ಲ. ಈಗ ರೌಡಿಯ ಕೊಲೆ ಪ್ರಕರಣ ಮುಂದಿಟ್ಟು ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕೆಡಿಸಲು ಮುಂದಾಗಿದ್ದಾರೆ. ಇವರು ತಮ್ಮ ಮನೋಸ್ಥಿತಿಯ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕು“ ಎಂದರು.

”ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಅಗತ್ಯತೆ ಎಲ್ಲಾ ಪಕ್ಷದವರಿಗೂ ಇದೆ. ಜನಪ್ರತಿನಿಧಿಗಳ ಜವಾಬ್ದಾರಿ ಇದೇ ಆಗಿದೆ. ಕಾನೂನಿನ ಅಲ್ಪ ಜ್ಞಾನವೂ ಇಲ್ಲದೆ ಮಾತಾಡುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಯೋಚಿಸಬೇಕಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಈಗಾಗಲೇ ಉಪಮುಖ್ಯಮಂತ್ರಿ ಅವರು ಸರ್ವಪಕ್ಷಗಳ ನಾಯಕರ ಸಭೆ ಕರೆಯುವುದಾಗಿ ಹೇಳಿದ್ದಾರೆ. ಹೀಗಿರುವಾಗ ಹಿಂದೂ ಯುವಕರ ಸಾವಿನಲ್ಲಿ ರಾಜಕೀಯ ಮಾಡುವುದನ್ನು ಬಿಡಲಿ“ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಿಥುನ್ ರೈ, ಇನಾಯತ್ ಅಲಿ, ಹರೀಶ್ ಕುಮಾರ್, ಶಾಲೆಟ್ ಪಿಂಟೋ, ಜಿ ಎ ಬಾವ, ಲಾರೆನ್ಸ್ ಡಿಸೋಜ, ಸುಹಾನ್ ಆಳ್ವ, ಪದ್ಮರಾಜ್ ಆರ್., ಶಾಹುಲ್ ಹಮೀದ್, ವಿಕಾಸ್, ಶುಭೋದ್ ಆಳ್ವ, ಕೃಷ್ಣ ಶೆಟ್ಟಿ, ಬಶೀರ್ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments