ವಿದ್ಯಾರ್ಥಿನಿ ಆತ್ಮಹತ್ಯೆಗೆ ಯುವಕನ ಕಿರುಕುಳ ಕಾರಣನಾ?

Spread the love

ವಿದ್ಯಾರ್ಥಿನಿ ಆತ್ಮಹತ್ಯೆಗೆ ಯುವಕನ ಕಿರುಕುಳ ಕಾರಣನಾ?

ಚಾಮರಾಜನಗರ: ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹೊಣಕನಪುರ ಗ್ರಾಮದಲ್ಲಿ ನಡೆದಿದ್ದು, ಈಕೆಯ ಸಾವಿಗೆ ಯುವಕನೊಬ್ಬ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಪೋಷಕರು ದೂರು ನೀಡಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಹೊಣಕನಪುರ ಗ್ರಾಮದ ನಿವಾಸಿ ಗುರುಸ್ವಾಮಿ ಎಂಬುವರ ಪುತ್ರಿ ಐಶ್ವರ್ಯ (16) ಎಂಬಾಕೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ನಂಜನಗೂಡಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಈಕೆಗೆ ಪಕ್ಕದ ಗ್ರಾಮದ ಯಡವನಹಳ್ಳಿ ಶ್ರೀನಿವಾಸ್ ಎಂಬ ಯುವಕ ಕರೆ ಮಾಡಿ ತೊಂದರೆ ನೀಡುತ್ತಿದ್ದ ಎಂದು ತಂದೆ ಗುರುಸ್ವಾಮಿ ಹೇಳಿದ್ದಾರೆ. ಈ ವಿಚಾರವಾಗಿ ಮಗಳು ನನಗೆ ತಿಳಿಸಿದ್ದಳು. ನಾನು ಶ್ರೀನಿವಾಸ್ ಹಾಗೂ ಅವರ ತಂದೆ ತಾಯಿಗೆ ಈ ಸಂಬಂಧ ತಿಳಿ ಹೇಳಿದ್ದೆ. ಆದರೆ ನನ್ನ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

ಯುವಕ ಶ್ರೀನಿವಾಸ್‌ ಕಿರುಕುಳ ನೀಡಿದ್ದರಿಂದಲೇ ಮನನೊಂದು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿರುವ ಗುರುಸ್ವಾಮಿ ಮತ್ತು ತಾಯಿ ಪ್ರೇಮಾ ಬೇಗೂರು ಪೊಲೀಸ್‌ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.


Spread the love