ವಿದ್ಯೆ ಸೇರಿದಂತೆ ಎಲ್ಲ ರೀತಿಯ ಸ್ಥಾನಮಾನಗಳು ದೇವರು ಕೊಟ್ಟ ಕೊಡುಗೆ – ವಂ|ಹೇಮಚಂದ್ರ ಕುಮಾರ್

Spread the love

ವಿದ್ಯೆ ಸೇರಿದಂತೆ ಎಲ್ಲ ರೀತಿಯ ಸ್ಥಾನಮಾನಗಳು ದೇವರು ಕೊಟ್ಟ ಕೊಡುಗೆ – ವಂ|ಹೇಮಚಂದ್ರ ಕುಮಾರ್

ಉಡುಪಿ: ಸಿಎಸ್ಐ ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯಲ್ಲಿ ಲೊಂಬಾರ್ಡ್ ಹೋಮ್ ಕೇರ್ ಅಥವಾ ಮನೆ ಆರೈಕೆ ಸೇವೆಗಳು ಮತ್ತು ಹೊಸ ನೇತ್ರಶಾಸ್ತ್ರ ವಿಭಾಗವು  ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆಗೊಂಡಿತು.

ನೂತನ ಸೇವೆಗಳನ್ನು ಉದ್ಘಾಟಿಸಿದ ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಹೇಮಚಂದ್ರ ಕುಮಾರ್ ಆಶೀವರ್ಚನ ನೀಡಿ, ನಮ್ಮದೊರೆತ ವಿದ್ಯೆ ಸೇರಿದಂತೆ ಎಲ್ಲ ರೀತಿಯ ಸ್ಥಾನಮಾನಗಳು ದೇವರು ಕೊಟ್ಟ ಕೊಡುಗೆಯಾಗಿದೆ. ಅದನ್ನು ಸೇವೆಯ ಮೂಲಕ ಸಮಾಜಕ್ಕೆ ನೀಡುವ ಕಾರ್ಯ ಮಾಡಬೇಕು. ಈ ಮೂಲಕ ದೇವರನ್ನು ಸ್ಮರಿಸಬೇಕು. ದೃಷ್ಟಿ ಎಂಬುದು ಜೀವನ. ಅದು ಇಲ್ಲದಿದ್ದರೆ ಜೀವನವೇ ಇಲ್ಲ. ಆದುದರಿಂದ ಕಣ್ಣಿಗೆ ನಾವು ಅತ್ಯಂತ ಪ್ರಾಮುಖ್ಯತೆ ನೀಡಬೇಕು. ಇಲ್ಲಿ ಹೋಮ್ ಕೇರ್ ಹಾಗೂ ನೇತ್ರ ವಿಭಾಗದ ಸೇವೆಗಳನ್ನು ಆರಂಭಿಸಿರುವುದು ಅತ್ಯುತ್ತಮವಾಗಿದೆ. ಇದು ಮನೆಮನೆ ತಲುಪಿಸುವ ಕಾರ್ಯಕ್ರಮ ಆಗಿದೆ. ಈ ಆಸ್ಪತ್ರೆ ಇನ್ನಷ್ಟು ವಿಸ್ತಾರವಾಗಲಿ ಎಂದು ಅವರು ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಸುಶಿಲ್ ಜತ್ತನ್ನ ಮಾತನಾಡಿ, ಹಾಸಿಗೆ ಹಿಡಿದಿರುವ ರೋಗಿಗಳು, ವೃದ್ಧರು ಆರೋಗ್ಯ ತಪಾಸಣೆ ನಡೆಸಲು ಆಸ್ಪತ್ರೆಗೆ ಬರಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಹೋಮ್ ಕೇರ್ ಸರ್ವಿಸ್ ಇಂದಿನ ಅತೀ ಅಗತ್ಯವಾಗಿದೆ. ಅದನ್ನು ಗುರುತಿಸಿಯೇ ನಮ್ಮ ಆಸ್ಪತ್ರೆ ಯಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ನಮ್ಮ ಹೋಮ್ಕೇರ್ ಸೇವೆಯಲ್ಲಿ ನರ್ಸಿಂಗ್ ಕೇರ್, ಫಿಜಿಯೋಥೆರಪಿ ನೀಡಲಾಗುವುದು. ಅದೇ ರೀತಿ ಔಷಧಿಗಳನ್ನು ಕೂಡ ಮನೆಗೆ ತಲುಪಿಸ ಲಾಗುತ್ತದೆ. ಇಡೀ ಜಿಲ್ಲೆಯಲ್ಲಿ ಪ್ರಥಮ ಎಂಬಂತೆ ವೈದ್ಯರೇ ಮನೆಮನೆಗೆ ತೆರಳಿ ಪರೀಕ್ಷೆ ಮಾಡಲಿದ್ದಾರೆ. ಆರಂಭದಲ್ಲಿ ಮಧ್ಯಾಹ್ನ 3ಗಂಟೆಯಿಂದ ಸಂಜೆ 5ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದ್ದು, ಮುಂದೆ ಅವಧಿಯನ್ನು ವಿಸ್ತರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಸ್ಪತ್ರೆಯ ನೇತ್ರತಜ್ಞರಾದ ಡಾಕ್ಟರ್ ನರೇಂದ್ರ ಶೆಣೈ ಡಾಕ್ಟರ್ ಆರ್ಥರ್ ರೋಡ್ರಿಗಸ್ ಮಾತನಾಡಿದರು. ಸಿಎಎ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಮಹಿಳಾ ಅನೋನ್ಯ ಕುಟುಂಬದ ಅಧ್ಯಕ್ಷೆ ಭಾರತಿ ಹೇಮಚಂದ್ರ, ಹಿರಿಯ ವೈದ್ಯಾಧಿಕಾರಿ ಡಾಕ್ಟರ್ ಗಣೇಶ್ ಕಾಮತ್, ರೆವರೆಂಡ್ ಐವನ್ ಸೋನ್ಸ್ ಉಪಸ್ಥಿತರಿದ್ದರು.


Spread the love