ಶಾಲಿನಿ ರಜನೀಶ್ ವಿರುದ್ಧ ಅವಹೇಳನ: ಎನ್ ರವಿಕುಮಾರ್ ರನ್ನು ಕೂಡಲೇ ಬಂಧಿಸಿ – ವೆರೋನಿಕಾ ಕರ್ನೆಲೀಯೋ

Spread the love

ಶಾಲಿನಿ ರಜನೀಶ್ ವಿರುದ್ಧ ಅವಹೇಳನ: ಎನ್ ರವಿಕುಮಾರ್ ರನ್ನು ಕೂಡಲೇ ಬಂಧಿಸಿ – ವೆರೋನಿಕಾ ಕರ್ನೆಲೀಯೋ

ಉಡುಪಿ: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವಿಧಾನ ಪರಿಷತ್ತಿನ ವಿಪಕ್ಷ ಬಿಜೆಪಿಯ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕೂಡಲೇ ಬಂಧಿಸುವಂತೆ ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಾತ್ರಿಯಿಡೀ ರಾಜ್ಯ ಸರಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಬಿಜೆಪಿಯ ಎನ್.ರವಿಕುಮಾರ್ ರವರು ಹೇಳಿಕೆ ನೀಡಿರುವ ದ್ವಂದ್ವ ಮಾತುಗಳು ಆಶ್ಚರ್ಯ ಹಾಗೂ ಅಸಹನೀಯವಾಗಿದೆ. ಮಾತೆತ್ತಿದರೆ ಮಹಿಳೆಯರನ್ನು ಮಾತೆ, ತಾಯಿ ಎಂದು ಸಂಭೋಧಿಸುವ ಬಿಜೆಪಿಗರು ನಿಜ ಬಣ್ಣ ಪದೇ ಪದೇ ಬಯಲಾಗುತ್ತಿದೆ.

ಮಹಿಳೆಯರನ್ನು ಕೆಟ್ಟ ದೃಷ್ಠಿಯಲ್ಲಿ ನೋಡುವುದರಲ್ಲಿ ಬಿಜೆಪಿಗರು ಬಲು ನಿಸ್ಸೀಮರು ಎನ್ನುವುದಕ್ಕೆ ಈ ಹಿಂದೆ ರಾಜ್ಯದಲ್ಲೇ ಬಿಜೆಪಿ ನಾಯಕರು ಮಹಿಳೆಯರ ಮೇಲೆ ದೌರ್ಜನ್ಯವೆಸಗಿರುವುದು ಹಲವಾರು ಸಾಕ್ಷಿಗಳು ಕಣ್ಣ ಮುಂದೆ ಇವೆ. ವಿಧಾನ ಪರಿಷತ್ತಿನ ವಿಪಕ್ಷ ಬಿಜೆಪಿಯ ಮುಖ್ಯ ಸಚೇತಕ ಎನ್.ರವಿಕುಮಾರ್ ಇತ್ತೀಚಿಗೆ ಕಲಬುರಗಿ ಜಿಲ್ಲಾಧಿಕಾರಿ ಕುರಿತು ವಿವಾದಿತ ಮಾತುಗಳನ್ನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದಲ್ಲದೆ ಮತ್ತೆ ಹೈಕೋರ್ಟ್ ಕೂಡ ಛೀಮಾರಿ ಹಾಕಿ ಜಿಲ್ಲಾಧಿಕಾರಿಯವರಲ್ಲಿ ಕ್ಷಮೆ ಕೇಳಲು ಹೇಳಿದ್ದು ಮತ್ತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿರುವುದು ಬಿಜೆಪಿಗರ ನಿಜ ಸಂಸ್ಕೃತಿ ಏನು ಎನ್ನುವುದನ್ನು ತೋರಿಸಿದೆ.

ರಾಜ್ಯದ ಉನ್ನತ ಸ್ಥಾನದಲ್ಲಿರುವ ಮಹಿಳೆಯನ್ನು ಇಂತಹ ಕೀಳು ಮಟ್ಟದಲ್ಲಿ ಮಾತನಾಡಿದರೂ ಕೂಡ ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಆಗಲಿ, ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಆಗಲಿ ಯಾರೂ ಕೂಡ ರವಿಕುಮಾರ್ ವಿರುದ್ದ ಮಾತನಾಡುವ ಅಥವಾ ಅವರ ಮಾತನ್ನು ತಪ್ಪು ಎಂದು ಹೇಳುವ ಕನಿಷ್ಠ ಸೌಜನ್ಯ ಕೂಡ ಇಲ್ಲದಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ. ಇಂತಹ ಅವಹೇಳನಕಾರಿಯಾಗಿ ಮಾತನಾಡಿರುವ ಎನ್ ರವಿಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಮತ್ತು ಅವರನ್ನು ಬಂಧಿಸುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments