ಶೀರೂರು ಸ್ವಾಮೀಜಿ ಮಠಾಧೀಶರೇ ಅಲ್ಲ – ಪೇಜಾವರ ಶ್ರೀ ಹೊಸ ಬಾಂಬ್
ಶೀರೂರು ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಪಟ್ಟದ ದೇವರನ್ನು ಹಸ್ತಾಂತರಿಸಿಲ್ಲ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ಪಷ್ಟಪಡಿಸಿದ್ದಾರೆ.
ಶಿರಸಿಯಲ್ಲಿ ಮಾತನಾಡಿ, ನಮಗೆ ಮಕ್ಕಳಿದ್ದಾರೆ ಎಂಬುದನ್ನು ಶೀರೂರು ಶ್ರೀಗಳೇ ಒಪ್ಪಿಕೊಂಡಿದ್ದಾರೆ. ಅವರು ಸನ್ಯಾಸ ಜೀವನದಿಂದ ಭ್ರಷ್ಟರಾಗಿದ್ದರು. ಅವರೊಬ್ಬ ಮಠಾಧೀಶರೇ ಅಲ್ಲ. ಹೀಗಾಗಿಯೇ ಅವರಿಗೆ ಪಟ್ಟದ ದೇವರನ್ನು ಹಸ್ತಾಂತರಿಸಿಲ್ಲ ಎಂದರು.
ಶೀರೂರು ಶ್ರೀ ಮೇಲೆ ನಮಗೆ ಯಾರಿಗೂ ವೈಯಕ್ತಿಕ ದ್ವೇಷವಿಲ್ಲ. ಅವರೇ ತಮಗೆ ಮಗನಿದ್ದಾನೆ ಎಂದು ಹೇಳಿರುವಾಗ ನಾವು 5 ಮಠಾಧೀಶರು ಸೇರಿ ಅವರೊಬ್ಬ ಸನ್ಯಾಸಿ ಅಲ್ಲ ಎಂದು ತೀರ್ಮಾನಕ್ಕೆ ಬಂದಿದ್ದೇವೆ. ಹಾಗಾಗಿ ಅವರ ಅಂತ್ಯಕ್ರಿಯೆಗೆ ಹೋಗುವುದಿಲ್ಲ ಎಂದಿದ್ದಾರೆ.
ಶೀರೂರು ಸ್ವಾಮೀಜಿ ವಿಷಪ್ರಾಶನದ ಬಗ್ಗೆ ಮಾತನಾಡಿದ ಅವರು, ನಿನ್ನೆ ಅವರ ಸಹೋದರ ನಮಗೆ ಕರೆ ಮಾಡಿದಾಗ, ಕೆಟ್ಟ ಕಿಲುಬುಪಾತ್ರೆಯಲ್ಲಿ ಪಲಾವು ತಿಂದ ಬಳಿಕ ಹೊಟ್ಟೆನೋವಿನಿಂದ ನರಳುತ್ತಿದ್ದಾರೆ ಎಂದಿದ್ದರು. ಇವತ್ತು ವಿಶ ಹಾಕಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಅನುಮಾನಕ್ಕೆ ಕಾರಣ ಗೊತ್ತಿಲ್ಲ. ಪೋಸ್ಟ್ ಮಾರ್ಟಮ್ ಆಗಿದೆ. ವರದಿ ಬಂದಮೇಲೆ ತಿಳಿಯುತ್ತದೆ ಎಂದು ಹೇಳಿದ್ದಾರೆ.













