ಸಂತೆಕಟ್ಟೆ: ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾಕ್ಕೆ ಕಾರು ಡಿಕ್ಕಿ; ಹಲವರಿಗೆ ಗಾಯ

291

ಸಂತೆಕಟ್ಟೆ: ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾಕ್ಕೆ ಕಾರು ಡಿಕ್ಕಿ; ಹಲವರಿಗೆ ಗಾಯ

ಉಡುಪಿ: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಇಂದು ಬೆಳಗ್ಗೆ ಕಾರೊಂದು ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಸಂತೆ ಕಟ್ಟೆ ಜಂಕ್ಷನ್ ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದ ಮಾರುತಿ ರಿಡ್ಝ್ ಕಾರು ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತು.

ಇದರಿಂದ ರಿಕ್ಷಾದಲ್ಲಿದ್ದ ಕಲ್ಯಾಣ್ ಪುರದ ಎರಡು ಆಂಗ್ಲ ಮಾಧ್ಯಮ ಶಾಲೆಗಳ ಏಳು ವಿದ್ಯಾರ್ಥಿಗಳು ಗಾಯಗೊಂಡ ಬಗ್ಗೆ ವರದಿಯಾಗಿದೆ. ಮಕ್ಕಳನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಿಕ್ಷಾ ಚಾಲಕ ಜಾನ್ ಎಂಬವರು ಗಾಯಗೊಂಡಿದ್ದಾರೆ. ರಿಕ್ಷಾದ ಎದುರು ಭಾಗ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ನಗರ ಸಂಚಾರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.