ಸಕಲ ಸರ್ಕಾರಿ ಗೌರವದೊಂದಿಗೆ ಫುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಎಚ್​. ಗುರು ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವದೊಂದಿಗೆ ಫುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಎಚ್​. ಗುರು ಅಂತ್ಯಕ್ರಿಯೆ

ಮಂಡ್ಯ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಮೂಲದ ಸಿಆರ್​ಪಿಎಫ್​ ಯೋಧ ಎಚ್​. ಗುರು ಅವರ ಅಂತ್ಯಕ್ರಿಯೆ ಕೆ.ಎಂ. ದೊಡ್ಡಿ ಸಮೀಪದ ಮೆಳ್ಳಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ನೆರವೇರಿತು.

 

ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​, ಸಚಿವ ಡಿ.ಸಿ. ತಮ್ಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್​. ಪುಟ್ಟರಾಜು, ಮಾಜಿ ಸಿಎಂ ಎಸ್​.ಎಂ. ಕೃಷ್ಣ, ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಪ್ರತಾಪ್​ ಸಿಂಹ, ಚಿತ್ರನಟ ಪ್ರಕಾಶ್​ ರೈ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಮಂಡ್ಯ ಜಿಲ್ಲೆಯ ವಿವಿಧ ಮಠಾಧೀಶರು ಇದ್ದರು.

ಮಂಡ್ಯ ಜಿಲ್ಲೆ ಸಶಸ್ತ್ರ ಪೊಲೀಸ್​ ಪಡೆ 3 ಸುತ್ತು ಕುಶಾಲ ತೋಪು ಸಿಡಿಸಿ ಗೌರವ ನಮನ ಸಲ್ಲಿಸಿತು. ಪತ್ನಿ ಕಲಾವತಿ ಕೂಡ ಸೆಲ್ಯೂಟ್​ ಹೊಡೆದು ಅಗಲಿದ ಯೋಧ ಪತಿಗೆ ಗೌರವವಂದನೆ ಸಲ್ಲಿಸಿದರು.

ಪರಿಹಾರದ ಚೆಕ್​ ವಿತರಣೆ: ಸಿಎಂ ಕುಮಾರಸ್ವಾಮಿ ಹುತಾತ್ಮ ಯೋಧ ಎಚ್​. ಗುರು ಪತ್ನಿ ಕಲಾವತಿ ಅವರಿಗೆ 25 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್​ ಅನ್ನು ವಿತರಿಸಿದರು. ಜತೆಗೆ ಸರ್ಕಾರಿ ಉದ್ಯೋಗ ಕೊಡುವ ಭರವಸೆ ನೀಡಿದರು.

ಅಗ್ನಿಸ್ಪರ್ಶ: ಗುರು ಅಮರ್​ ರಹೇ, ಭಾರತ್​ ಮಾತಾ ಕೀ ಜೈ ಘೋಷಣೆಯ ಹಿನ್ನೆಲೆಯಲ್ಲಿ ಹುತಾತ್ಮ ಯೋಧ ಗುರು ಅವರ ತಂದೆ ಹೊನ್ನಯ್ಯ, ತಾಯಿ, ಪತ್ನಿ ಕಟ್ಟಿಗೆ ತುಂಡನ್ನು ಇರಿಸಿದರು. ಬಳಿಕ ಯೋಧನ ಸಹೋದರರು ಹಾಗೂ ಕುಟುಂಬ ವರ್ಗದವರು ಚಿತೆಗೆ ಪೂಜೆ ಸಲ್ಲಿಸಿದರು. ಪಾರ್ಥಿವಶರೀರಕ್ಕೆ ಗುರು ಸಹೋದರ ಮಧು ಅಗ್ನಿ ಸ್ಪರ್ಶ ಮಾಡಿದರು.