ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಹಂಚುವ ಕೆಲಸ ಶ್ಲಾಘನೀಯ – ಪ್ರಭಾಕರ ಪೂಜಾರಿ
- ಗಾಂಧಿ ಆಸ್ಪತ್ರೆಗೆ 30ರ ಸಡಗರ : ಸ್ವಯಂಪ್ರೇರಿತ ರಕ್ತದಾನ ಶಿಬಿರ
ಉಡುಪಿ: ಸಿಟಿ ಬಸ್ ನಿಲ್ದಾಣದ ಬಳಿಯ ಗಾಂಧಿ ಆಸ್ಪತ್ರೆಗೆ 30ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಅಜ್ಜರಕಾಡುಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವು ಆಸ್ಪತ್ರೆಯ ಲಹರಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಹಂಚುವ ಕೆಲಸವನ್ನು ಗಾಂಧಿ ಆಸ್ಪತ್ರೆ ಮಾಡುತ್ತಿದೆ . ನಗರಸಭೆ ಜತೆ ಗಾಂಧಿ ಆಸ್ಪತ್ರೆ ಕೈಜೋಡಿಸಿದ್ದು ಎಂ.ಹರಿಶ್ಚಂದ್ರರ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.
ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಆರೋಗ್ಯ, ಶಿಕ್ಷಣ, ಆದಾಯದ ಆಧಾರದಲ್ಲಿ ಮಾನವ ಅಭಿವೃದ್ಧಿ ಅಳತೆಗೋಲಾಗಿದ್ದು ಮಡಾಮಕ್ಕಿಯಂತಹ ಕುಗ್ರಾಮದಿಂದ ಬಂದ ಎಂ.ಹರಿಶ್ಚಂದ್ರರ ಸಾಧನೆ ಅನ್ಯರಿಗೆ ಮಾದರಿ ಎಂದು ಹೇಳಿದರು.
30ವರ್ಷಗಳ ಹಿಂದೆ ಗೆಳೆಯನ ಜತೆ 25 ಬೆಡ್‍ಗಳಿಂದ ಎಂ ಹರಿಶ್ಚಂದ್ರರು ಆರಂಭಿಸಿದ ಆಸ್ಪತ್ರೆ 2002ರಲ್ಲಿ ಸ್ವಂತ ಕಟ್ಟಡ ಹೊಂದಿ, ಐದು ಡಯಾಲಿಸಿಸ್ ಯಂತ್ರ ಅಳವಡಿಸಿದೆ. 25 ವರುಷಗಳಿಂದ ಪಂಚಮಿ ಟ್ರಸ್ಟ್ ಮೂಲಕ ಸಮಾಜ ಮುಖಿ ಸೇವೆ, ಸಿಟಿ ಬಸ್ ನಿಲ್ದಾಣದಿಂದ ಕಲ್ಸಂಕ ತನಕದ ಮುಖ್ಯರಸ್ತೆಯನ್ನು ಹತ್ತು ವರ್ಷದಿಂದ ಪ್ರತಿ ಭಾನುವಾರ ಸ್ವಚ್ಚತೆ ಕಾರ್ಯ, ಗಾರ್ಡನ್ ನಿರ್ವಹಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಹೇಳಿದರು.
ಉಡುಪಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಚ್. ಜಯಪ್ರಕಾಶ್ ಕೆದ್ಲಾಯ ಮಾತನಾಡಿದರು. ಗಾಂಧಿ ಆಸ್ಪತ್ರೆ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಎಂ.ಹರಿಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಾಂಧಿ ಆಸ್ಪತ್ರೆಯಲ್ಲಿ ಜನಿಸಿದ, ನಾನಾ ಕ್ಷೇತ್ರದ ಸಾಧಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಯನ್ನು ಗೌರವಿಸಲಾಯಿತು.
ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಎಜಿಎಂ ವಾದಿರಾಜ ಭಟ್, ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ, ಡಾ. ವಿದ್ಯಾ ವಿ ತಂತ್ರಿ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿ, ಸುಮಾ ವಂದಿಸಿದರು.