ಸಮ್ಮಿಶ್ರ ಸರಕಾರದ ಅಪವಿತ್ರ ಮೈತ್ರಿಯ ‘ಸಾಂದರ್ಭಿಕ ಶಿಶು’ ಈ ಬಜೆಟ್ -ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಮಂಗಳೂರು: ಅನೇಕ ಗೊಂದಲಗಳ ನಡುವೆ ಧರ್ಮಸ್ಥಳ ಶಾಂತಿವನದ ಪ್ರಕೃತಿಚಿಕಿತ್ಸೆಯ ಒತ್ತಡಕ್ಕೆ ಮಣಿದು ಪೆಬ್ರವರಿ 2018ರ ಸಿದ್ದರಾಮಯ್ಯನವರ ಮತ್ತು ಜುಲೈ 2018ರ ಕುಮಾರಸ್ವಾಮಿಯವರ ಬಜೆಟ್ಗಳ ಸಾಂದರ್ಭಿಕ ಅನುಕೂಲಗಳ ಹೂರಣ ಹಾಗೂ ಅಪವಿತ್ರ ಮೈತ್ರಿಯ ‘ಸಾಂಧರ್ಬಿಕ ಶಿಶು’ವೇ ಈ ಬಜೆಟ್ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿಗಳು ಈ ಹಿಂದೆ ತಿಳಿಸಿದಂತೆ ‘ಸಾಂಧರ್ಬಿಕ ಶಿಶು’ವಿನ ಭವಿಷ್ಯವೇ ಒಂದು ವರ್ಷ. ಇಂತಹ ‘ಶಿಶು’ ತೀವ್ರ ಸುಶ್ರೂಷಾ ಘಟಕದಲ್ಲಿರುವ ಈ ಸಂದರ್ಭದಲ್ಲಿ ಈ ಬಜೆಟ್ ಎಷ್ಟು ಪ್ರಸ್ತುತ ಎನ್ನುವುದು ಯಕ್ಷಪ್ರಶ್ನೆ.
ಅಧಿಕಾರ ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ವಾಣಿಜ್ಯ ಬ್ಯಾಂಕುಗಳು ಸೇರಿದಂತೆ ರೈತರ ಎಲ್ಲಾ ಸಾಲಮನ್ನಾ ಎನ್ನುವ ‘ಕುಮಾರ’ನ ಘೋಷಣೆ ‘ಉತ್ತರಕುಮಾರ’ನ ಪೌರುಷವಾಗಿರುವುದು ವಾಸ್ತವ. ಸರಕಾರದ ಅಯುಷ್ಯವೇ ಒಂದು ವರ್ಷವೆಂದು ಹೇಳಿದ ಮುಖ್ಯಮಂತ್ರಿಗಳು, ರೂ. 34 ಸಾವಿರ ಕೋಟಿ ಸಾಲವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ಮನ್ನಾಗೊಳಿಸುವ ಭರವಸೆ ನೀಡಿರುವುದೇ ಹಾಸ್ಯಾಸ್ಪದ.
ಈ ಬಜೆಟ್ ಕರಾವಳಿ
ಮತ್ತು ಮಲೆನಾಡನ್ನು ಸಂಪೂರ್ಣವಾಗಿ ಕಡೆಗಣಿಸಿ ರಾಜಕೀಯವಾಗಿ ತನ್ನ ಸಂಕುಚಿತ ಮನೋಭಾವವನ್ನು ಪ್ರತಿಬಿಂಭಿಸಿರುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಕೇವಲ ಹಳೆಮೈಸೂರಿಗೆ ಸೀಮಿತವಾಗಿರುವುದು ಈ ಬಜೆಟಿನಿಂದ ಸ್ಪಷ್ಟವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡದಿರುವುದು ಆಶ್ಚರ್ಯ ಹಾಗೂ ಇದು ಭವಿಷ್ಯದ ದೃಷ್ಟಿಯಲ್ಲಿ ಮಾರಕ.
2000ದವರೆಗೆ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು, ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಭವಿಷ್ಯ ಅಸ್ಪಷ್ಟವಾಗಿದೆ. ಬಹುನಿರೀಕ್ಷಿತ ಕಾಲ್ಪನಿಕ ಸಮಸ್ಯೆ ಪರಿಹಾರ, ಶಿಕ್ಷಕರ ವೇತನ ತಾರತಮ್ಯದ ಗೊಂದಲ ನಿವಾರಣೆ, ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ, ಕನ್ನಡಮಾದ್ಯಮ ಶಾಲೆಗಾಳ ಸ್ಥಿತಿಗತಿಗಳ ಸುಧಾರಣೆಗೆ ತೀವ್ರ ಅಗತ್ಯ ಕ್ರಮಗಳು, ವರ್ಗಾವಣೆ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿಯೇ ಉಳಿದಿರುವುದು ದುರಂತ.
ಯಾವುದೇ ದೂರದೃಷ್ಟಿಯಿಲ್ಲದ, ಯಾರನ್ನೂ ಖುಷಿಪಡಿಸದ, ಅಪವಿತ್ರ ಮೈತ್ರಿಯ ಸಮ್ಮಿಶ್ರ ಸರಕಾರದ ಹೊಂದಾಣಿಕೆಯ ಬಜೆಟನ್ನು ರಾಜ್ಯದ ಜನತೆ ಸಂಪೂರ್ಣವಾಗಿ ತಿರಸ್ಕರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.













