ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ‘ಕೊಡಿಯಡಿ-2020’ ಉದ್ಘಾಟನೆ

Spread the love

ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ‘ಕೊಡಿಯಡಿ-2020’ ಉದ್ಘಾಟನೆ

ವಿದ್ಯಾಗಿರಿ: ಸನ್ಮಾರ್ಗದಲ್ಲಿ ಗಳಿಸಿದ ಹೆಸರು, ಕೀರ್ತಿ ಎಂದಿಗೂ ಶಾಶ್ವತ. ಅವಿರತ ಪರಿಶ್ರಮವೊಂದೇ ಸಾಧನೆಯ ಮಾರ್ಗ ಎಂದು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಹೇಳಿದರು

ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ತುಳು ಸಂಸ್ಕøತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ “ಕೊಡಿಯಡಿ-2020” ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸನ್ಮಾರ್ಗದಲ್ಲಿ ನಡೆದು ವಿವಿಧ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮದಿಂದ ಉನ್ನತ ಮಟ್ಟಕ್ಕೇರಿದ ಹಲವು ಸಾಧಕರನ್ನು ಕರುನಾಡಿಗೆ ಪರಿಚಯಿಸಿದ ಕೀರ್ತಿ ತುಳುನಾಡಿಗೆ ಸಲ್ಲುತ್ತದೆ. ತುಳು ಎನ್ನುವುದು ನಮ್ಮೆಲ್ಲರ ಮಾತೃ ಭಾಷೆಯಂತಿದ್ದು, ತುಳು ಭಾಷೆ, ತುಳುನಾಡು ಎನ್ನುವುದು ನಮ್ಮೆಲ್ಲರ ಹೆಮ್ಮೆ. ಹಾಗಾಗಿ ತುಳುನಾಡಿನ ಹೆಸರನ್ನು ನಭದೆತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ನಾವು ಮಾಡಬೇಕು. ಇಲ್ಲಿನ ಸಂಸ್ಕøತಿ, ಆಚಾರ-ವಿಚಾರಗಳೆಲ್ಲವೂ ವಿಶಿಷ್ಠಮಯವಾಗಿದೆ. ಈ ನಾಡಿನ ಕ್ರೀಡೆಗಳು ಅತ್ಯಂತ ಸುಂದರ ಹಾಗೂ ಪ್ರಾಚೀನ ಕಾಲದಲ್ಲಿ ಇಲ್ಲಿನ ಜನರನ್ನು ಸದೃಢರನ್ನಾಗಿಸುತ್ತಿತ್ತು. ಜತೆಗೆ ಯಾವುದೇ ರೋಗ, ರುಜಿನಗಳು ನಮ್ಮನ್ನು ಭಾಧಿಸುತ್ತಿರಲಿಲ್ಲ ಆದರೆ ಇಂದಿನ ಮಕ್ಕಳಿಗೆ ಹಳ್ಳಿ ಕ್ರೀಡೆಗಳ ಪರಿಚಯವೇ ಇಲ್ಲದಿರುವುದು ವಿಪರ್ಯಾಸವೇ ಸರಿ ಎಂದು ಹೆಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮೂಡುಬಿದಿರೆ ತುಳುಕೂಟದ ಧನಕೀರ್ತಿ ಬಲಿಪ, ಇಂದು ಪ್ರತಿಯೊಂದು ಭಾಷೆಯನ್ನು ಇಂಗ್ಲೀಷ್ ತನ್ನ ಕಬಂಧ ಬಾಹುವಿಗೆ ಸಿಲುಕಿಸಿ ಉಸಿರು ಕಟ್ಟಿಸುತ್ತಿದೆ. ಅಲ್ಲದೆ ತುಳುವಿನಲ್ಲಿರುವಷ್ಟು ಪದ ಸಂಪತ್ತು ಇಂಗ್ಲೀಷ್ ಭಾಷೆಯಲ್ಲಿಲ್ಲ. ಹಾಗಾಗಿ ತುಳು ಎನ್ನುವುದು ಅತ್ಯಂತ ಸುಂದರ ಹಾಗೂ ಪ್ರೌಢಿಮೆ ಹೊಂದಿದ ಭಾಷೆ. ನಮ್ಮ ತುಳುನಾಡಿನ ಹೆಮ್ಮೆಯ ಕಲೆಗಳಾದ ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಜಗತ್ತಿನ ಬೇರೆಲ್ಲಿಯೂ ಕಾಣಸಿಗುವುದಿಲ್ಲ. ಈ ಕಲೆಗಳಲ್ಲಿ ತುಳು ಭಾಷಾ ಸಂಸ್ಕøತಿಯ ಅಂದ-ಚೆಂದ ತೆರೆದುಕೊಳ್ಳುತ್ತಾ ಹೋಗುವುದು ವಿಶೇಷ ಎಂದರು

ಕಾರ್ಯಕ್ರಮದಲ್ಲಿ ಕಾಲೆಜಿನ ಆಢಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಡಾ.ಯೋಗೀಶ ಕೈರೋಡಿ ಹಾಗೂ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು. ನಮಿತಾ ವಂದಿಸಿ, ಪ್ರಜ್ಞಾ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love