ಸ್ಪೀಕರ್ ವಿರುದ್ಧ ಭ್ರಷ್ಟಾಚಾರ ಆರೋಪ | ಸತ್ಯ ಯಾವತ್ತೂ ದಾಖಲೆಯಲ್ಲಿರುತ್ತೆ: ಯು.ಟಿ.ಖಾದರ್

Spread the love

ಸ್ಪೀಕರ್ ವಿರುದ್ಧ ಭ್ರಷ್ಟಾಚಾರ ಆರೋಪ | ಸತ್ಯ ಯಾವತ್ತೂ ದಾಖಲೆಯಲ್ಲಿರುತ್ತೆ: ಯು.ಟಿ.ಖಾದರ್

ಮಂಗಳೂರು: ಸತ್ಯ ಯಾವಾಗಲೂ ದಾಖಲೆಯಲ್ಲಿ ಇರುತ್ತದೆ. ಆರೋಪ ಮಾಡಿದವರು ಯಾವುದನ್ನೂ ಲಿಖಿತವಾಗಿ ಸ್ಪೀಕರ್ ಕಚೇರಿಗೆ ನೀಡಿಲ್ಲ. ಹಾಗಾಗಿ ಇದೆಲ್ಲಾ ಚರ್ಚೆಯಾಗುವ ವಿಷಯವೇ ಅಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ತಮ್ಮ ವಿರುದ್ಧದ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರೋಪ ಮಾಡಿದವರು ಮಸಾಜ್ ಚೇರ ಬಗ್ಗೆ ಮಾತನಾಡಿದ್ದಾರೆ. ಆದರೆ ಅದನ್ನು ಕಂಪನಿಯವರು ಉಚಿತವಾಗಿ ಹಾಕಿರುವುದು. ಅಧಿವೇಶನದ ಸಂದರ್ಭ ಶಾಸಕರಿಗೆ ಉಚಿತ ನೆಲೆಯಲ್ಲಿ ಈ ಮಸಾಜ್ ಚೇರ್‌ನಲ್ಲಿ ರಿಲ್ಯಾಕ್ಸ್ ಆಗಲು ಕಂಪನಿಯವರು ಅವಕಾಶ ನೀಡುತ್ತಾರೆ. ಆ ಬಳಿಕ ಶಾಸಕರು ತಮಗೆ ಬೇಕಿದ್ದಲ್ಲಿ ಖರೀದಿಸಿಕೊಳ್ಳಬಹುದು. ಶಾಸಕರಿಗೆ ಅಗತ್ಯವಾದ ಸವಲತ್ತು ನೀಡುವುದು ಸ್ಪೀಕರ್ ಆಗಿ ನನ್ನ ಜವಾಬ್ಧಾರಿ ಎಂದು ಹೇಳಿದರು.

ಜವಾಬ್ಧಾರಿ ಸ್ಥಾನದಲ್ಲಿ ಇರುವವರು ಜವಾಬ್ಧಾರಿಯುತವಾಗಿ ನಡೆದುಕೊಳ್ಳಬೇಕು. ಏನೇ ಆರೋಪ ಮಾಡುವವರು ಮೊದಲು ಆ ಬಗ್ಗೆ ಅಧ್ಯಯನ ಮಾಡಲಿ. ಏನೇ ಆಕ್ಷೇಪವಿದ್ದರೂ ಆ ಬಗ್ಗೆ ಲಿಖಿತವಾಗಿ ದೂರು ನೀಡಬಹುದು. ಸಾಹಿತಿಗಳಿಗೆ 25000 ರೂ. ಶಾಲು ಹಾಕಲಾಗಿದೆ ಎಂದು ದೂರಲಾಗಿದೆ. ಸಾಹಿತಿಗಳಿಗೆ ಗೌರವ ನೀಡುವಾಗ ಅದಕ್ಕೆ ತಕ್ಕ ರೀತಿಯಲ್ಲಿಯೇ ಸನ್ಮಾನಿಸಬೇಕಾಗುತ್ತದೆ. ಅದು ರೇಷ್ಮೆಯ ಶಾಲು. ಅದನ್ನು ಕರ್ನಾಟಕ ರಾಜ್ಯ ಸಿಲ್ಕ್ ಬೋರ್ಡ್‌ನಿಂದಲೇ ಖರೀದಿಸಲಾಗಿದೆ ಎಂದವರು ಹೇಳಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಪವರ್ ಶೇರಿಂಗ್ ವಿಚಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ನಾನು ಇತರರು ಮಾತನಾಡಿದ ರೀತಿಯಲ್ಲಿ ಮಾತನಾಡಲು ಆಗುವುದಿಲ್ಲ. ಈ ವಿಷಯ ನನಗೆ ನಿಮ್ಮಿಂದಲೇ ತಿಳಿದಿರುವುದು. ಸ್ಪೀಕರ್ ಆದ ಬಳಿಕ ನನ್ನ ರಾಜಕೀಯ ಚಾನೆಲ್ ಬಂದ್ ಆಗಿದೆ. ಈಗ ಸಂವಿಧಾನ ಚಾನೆಲ್ ಮಾತ್ರ ಇದೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ನಿಯಮ ಪ್ರಕಾರ ವಿಷಯ ಎತ್ತಿದರೆ ಮಾತನಾಡಲು ಅವಕಾಶ ನೀಡಲಾಗುತ್ತದೆ. ಡಿ. 8ರಿಂದ 19ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಭಾಗವಹಿಸುವ ಎಲ್ಲಾ ಶಾಸಕರಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಸುವರ್ಣ ಸೌಧದಲ್ಲಿ ಸುಂದರ ಉದ್ಯಾನವನ ಉದ್ಘಾಟನೆ ಹಾಗೂ ಕಲಬುರ್ಗಿಯ ವಿನೋದ್ ಕುಮಾರ್ ಅವರು ಖಾದಿ ಬಟ್ಟೆಯಲ್ಲಿ ರಚಿಸಿರುವ 55*75 ಅಡಿಯ ದೇಶದ ಎರಡನೇ ಅತೀ ದೊಡ್ಡ ರಾಷ್ಟ್ರ ಧ್ವಜವನ್ನು ಅಧಿವೇಶನದಲ್ಲಿ ಪ್ರದರ್ಶಿಸಲಾಗುವುದು. ಅಧಿವೇಶನದಲ್ಲಿ ಆರಕ್ಕೂ ಅಧಿಕ ಮಸೂದೆಗಳು ಮಂಡನೆಗೆ ಸಿದ್ಧವಾಗಿವೆ. ಕಳೆದ ಅಧಿವೇಶನದಲ್ಲಿ 39ರಲ್ಲಿ 37 ಮಸೂದೆಗಳು ಚರ್ಚೆಯ ಮೂಲಕ ಅಂಗೀಕಾರಗೊಂಡಿವೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಬೀದಿನಾಯಿಗಳ ಹಾವಳಿಯ ಕುರಿತಂತೆ ಪ್ರತಿಕ್ರಿಯಿಸಿದ ಸ್ಪೀಕರ್, ಬೆಂಗಳೂರಿನ ವಿಧಾನಸೌಧದ ಸುತ್ತಲೂ ಇರುವ 53 ಬೀದಿ ನಾಯಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಹಾಗಾಗಿ ಅಲ್ಲಿನ ಸೂಕ್ತ ಜಾಗದಲ್ಲಿ ಅವುಗಳಿಗೆ ಪುನರ್ವಸತಿ ಕಲ್ಪಿಸಲು ಕೋರಲಾಗಿದೆ. ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಆ ಕ್ರಮಕ್ಕೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿಯೂ ಇಲ್ಲಿನ ಪರಿಸ್ಥಿತಿಗೆ ಪೂರಕವಾಗಿ ನಿಯಮ ಆಗಬೇಕು. ಇದಕ್ಕಾಗಿ ರಾಜ್ಯದಲ್ಲಿ ನೀತಿಯೊಂದನ್ನು ಜಾರಿಗೊಳಿಸುವ ಅಗತ್ಯವಿದೆ. ನಾಯಿ ಸಾಕುವವರು, ಶ್ವಾನ ಪ್ರಿಯರು ಕೂಡಾ ಈ ನಿಟ್ಟಿನಲ್ಲಿ ಸಹಕಾರ ನೀಡುವ ಅಗತ್ಯವಿದೆ ಎಂದು ಹೇಳಿದರು.


Spread the love
Subscribe
Notify of

0 Comments
Inline Feedbacks
View all comments