ಸ್ವತಃ ಫಿಲ್ಡೀಗಿಳಿದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ; ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯದವರಿಗೆ ದಂಡ
ಉಡುಪಿ: ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ, ಮಾಸ್ಕ್ ಧರಿಸದೇ ಓಡಾಡುವ, ಸಾಮಾಜಿಕ ಅಂತರ ಕಾಪಾಡದೇ ಇರುವವರಿಗೆ, ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಸ್ವತಃ ರಸ್ತೆಗಿಳಿದು ದಂಡ ವಿಧಿಸಿ ತಿಳಿವಳಿಕೆ ಮೂಡಿಸುವ ವಿಶಿಷ್ಟ ಕಾರ್ಯಾಚರಣೆ ಮಂಗಳವಾರ ನಗರದಲ್ಲಿ ನಡೆಸಲಾಯಿತು.
 
  
  
  
  
  
  
  
  
  
  
 
ನಗರದ ಸರ್ವಿಸ್ ಬಸ್ ಸ್ಟ್ಯಾಂಡ್ ನಿಂದ ಆರಂಭಿಸಿದ ಜಿಲ್ಲಾಧಿಕಾರಿ ಜಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಅಧಿಕಾರಿಗಳ ತಂಡ ಕೋವಿಡ್-19 ಸೋಂಕು ತಡೆಗೆ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎನ್ನುವ ನಿಯಮಗಳನ್ನು ಉಲ್ಲಂಘಿ ಸಿದವರ ಮೇಲೆ ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ದಂಡ ವಿಧಿಸಿ ಬಿಸಿ ಮುಟ್ಟಿಸಿದರು.
ಹೊಟೇಲ್ ಮತ್ತು ಅಂಗಡಿಗಳಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ದೈಹಿಕ ಅಂತರಕ್ಕೆ ವ್ಯವಸ್ಥೆ ಮಾಡದ ಕೆಲವು ಹೊಟೇಲ್ಗಳ ಮಾಲೀಕರಿಗೆ, ಅಂಗಡಿಗಳಲ್ಲಿ ಸ್ಯಾನಿಟೈಜರ್ ಇಟ್ಟಿರದ, ಮಾಸ್ಕ್ ಧರಿಸದ ಕೆಲವು ಅಂಗಡಿಗಳ ಮಾಲೀಕರಿಗೂ ದಂಡ ವಿಧಿಸಿದರು. ಅಲ್ಲದೆ ಮೆಡಿಕಲ್ ಗಳಿಗೆ ಕೂಡ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಜ್ವರ ಶೀತಕ್ಕೆ ಮೆಡಿಕಲ್ ಗಳಲ್ಲಿ ನೀಡಿದ ಔಷದದ ವಿವರಗಳನ್ನು ಪರೀಶಿಲಿಸಿದರು ಅಲ್ಲದೆ ದಾಖಲೆ ಇಟ್ಟಿರದ ಮೆಡಿಕಲ್ ಶಾಪ್ ಗಳಿಗೆ ದಂಡ ವಿಧಿಸಿದರು.
ಅದೇ ರೀತಿ ಕಾರಿನಲ್ಲಿ ಯಾವುದೇ ರೀತಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಕುಳಿತು ಹರಟೆ ಹೊಡೆಯುತ್ತಿದ್ದ ಕಾರು ಚಾಲಕರಿಗೂ ಕೂಡ ದಂಡ ವಿಧಿಸಿದರು.
ಜಿಲ್ಲೆಯಾದ್ಯಂತ ದಿನನಿತ್ಯ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಸ್ಥಳೀಯರಲ್ಲಿ ಕೂಡ ಕೊರೋನಾ ಪಾಸಿಟಿವ್ ಹೆಚ್ಚಿದೆ. ಇದಕ್ಕಾಗಿ ಸಾಮಾಜಿಕ ಜಾಗೃತಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯುವುದೇ ಮುಖ್ಯವಾದ ಜವಾಬ್ದಾರಿಯಾಗಿದೆ. ಆದರೆ ಜಿಲ್ಲಾದ್ಯಂತ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಗಳನ್ನು ಕೆಲವರು ಉಲ್ಲಂಘಿಸುವುದು ಕಂಡು ಬರುತ್ತಿದೆ. ವೈಯಕ್ತಿಕ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದಾಗಿ ಮಾಸ್ಕ್ ಧರಿಸುವುದು ಎಲ್ಲರ ಜವಾಬ್ದಾರಿಯಾಗಲಿ, ಇದು ಎಲ್ಲರಿಗೂ ಪ್ರೇರಣೆಯಾಗಲಿ ಎನ್ನುವ ಸಂದೇಶ ಸಾರ್ವಜನಿಕರಿಗೆ ಹೋಗುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮಾಸ್ಕ್ ಧರಿಸುವ ಜತೆಗೆ ಸುರಕ್ಷಿತ ಅಂತರ ಕಾಪಾಡಿ ಸಮಾಜದ ಸ್ವಾಸ್ಥ್ಯಕಾಪಾಡಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಕೋರಿದರು.
 
            











