ಹಾರ್ಮುಝ್ ಜಲಸಂಧಿಯಲ್ಲಿ ಹಡಗಿನ ಮೇಲೆ ಇರಾನ್ ಕ್ಷಿಪಣಿ ದಾಳಿ: ಒಮಾನ್ ನೌಕಾಪಡೆಯಿಂದ ಬಂಟ್ವಾಳದ ಯುವಕನ ರಕ್ಷಣೆ
ಮಂಗಳೂರು: ಜಾಗತಿಕ ಉದ್ವಿಗ್ನತೆಯ ಕೇಂದ್ರಬಿಂದುವಾಗಿರುವ ಹಾರ್ಮುಝ್ ಜಲಸಂಧಿಯ ಒಮನ್ ಕರಾವಳಿ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಇರಾನ್ ನಡೆಸಿದ ಭೀಕರ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ನಿವಾಸಿ ರಚನ್ ಆರ್.ಕೆ. ಸೇರಿದಂತೆ 10 ಮಂದಿ ಭಾರತೀಯ ನಾವಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾಳಿಗೆ ತುತ್ತಾದ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ಒಮನ್ ನೌಕಾಪಡೆ (Oman Navy) ಯಶಸ್ವಿಯಾಗಿ ರಕ್ಷಿಸಿದ್ದು, ಸದ್ಯ ರಚನ್ ಸುರಕ್ಷಿತವಾಗಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ಕಾರ್ಗೋ ಶಿಪ್ಪಿಂಗ್ ಕಂಪೆನಿಯಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಚನ್ ಆರ್.ಕೆ. ಅವರು ಶನಿವಾರ ಕರ್ತವ್ಯದಲ್ಲಿದ್ದ ಹಡಗಿನ ಮೇಲೆ ಇರಾನ್ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದವು. ಈ ಬಗ್ಗೆ ರಚನ್ ತಂದೆ ರೋಹಿತಾಕ್ಷ ಬಾಣಬೆಟ್ಟು ಅವರಿಗೆ ಆಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿದ್ದು, ಘಟನೆಯ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ. “ಹಡಗಿನ ಮೇಲೆ ದಾಳಿ ನಡೆಯುವ ಬಗ್ಗೆ ನಮಗೆ ಮೊದಲೇ ಮುನ್ನೆಚ್ಚರಿಕೆ ಸಂದೇಶ ಲಭಿಸಿತ್ತು. ಆದರೂ ಒಮನ್ ತೀರದಲ್ಲಿ ಹಡಗು ಮುನ್ನಡೆಯುತ್ತಿದ್ದಾಗ ಶನಿವಾರ ಮಧ್ಯರಾತ್ರಿ 2 ಗಂಟೆಗೆ ಇರಾನ್ ಕ್ಷಿಪಣಿ ನೇರವಾಗಿ ಬಂದು ಹಡಗಿಗೆ ಅಪ್ಪಳಿಸಿತು. ತಕ್ಷಣವೇ ಇಂಜಿನ್ ಕೊಠಡಿಯಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು” ಎಂದು ತಿಳಿಸಿದ್ದಾರೆ.
“ಇಂಜಿನ್ ರೂಮ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ನಿದ್ರಿಸುತ್ತಿದ್ದ ನಾವೆಲ್ಲರೂ ತಕ್ಷಣವೇ ಎಚ್ಚೆತ್ತು ಗಾಬರಿಯಿಂದ ಓಡಿಬಂದೆವು. ಹಡಗು ಮುಳುಗುವ ಪರಿಸ್ಥಿತಿ ತಲುಪುತ್ತಿದ್ದಂತೆ ಲೈಫ್ ಬೋಟ್ ಮೂಲಕ ನಾವೆಲ್ಲರೂ ಸಮುದ್ರಕ್ಕೆ ಧುಮುಕಿದೆವು. ಈ ಭೀಕರ ಪ್ರಕ್ರಿಯೆಯ ನಡುವೆ ನಮ್ಮ ತಂಡದಲ್ಲಿದ್ದ ಪುಣೆ ನಿವಾಸಿಯಾದ ಸಹೋದ್ಯೋಗಿಯೊಬ್ಬರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ಆದರೆ, ಅದೃಷ್ಟವಶಾತ್ ಒಮನ್ ನೌಕಾಪಡೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ನಮ್ಮನ್ನು ರಕ್ಷಿಸಿ ತನ್ನ ಸೇನಾ ನೆಲೆಗೆ ಕರೆದೊಯ್ದು ಆಶ್ರಯ ನೀಡಿದೆ” ಎಂದು ರಚನ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಚನ್ ಅವರ ತಂದೆ ರೋಹಿತಾಕ್ಷ ಬಾಣಬೆಟ್ಟು, “ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ತಾರಕಕ್ಕೇರಿರುವುದರಿಂದ ನಾವು ಮೊದಲೇ ಆತಂಕದಲ್ಲಿದ್ದೆವು. ಮಗ ಇದ್ದ ಹಡಗಿನ ಮೇಲೆ ದಾಳಿಯಾಗಿದೆ ಎಂಬ ಸುದ್ದಿ ತಿಳಿದಾಗ ನಮ್ಮ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿತ್ತು. ಆದರೆ, ಒಮನ್ ಸೇನೆಯ ನೆರವಿನಿಂದ ಮಗ ಸುರಕ್ಷಿತವಾಗಿದ್ದು, ತಾನೀಗ ದುಬೈಗೆ ಹೊರಟಿರುವುದಾಗಿ ಫೋನ್ ಮಾಡಿ ತಿಳಿಸಿದಾಗ ನಿರಾಳರಾದೆವು ಎಂದು ತಿಳಿಸಿದ್ದಾರೆ.













