ಹೆಮ್ಮಾಡಿ ಗುಲಾಬಿ ಕೊಲೆ ಆರೋಪಿಯನ್ನು ಬಂಧಿಸಿದ ಪೊಲೀಸರು

ಹೆಮ್ಮಾಡಿ ಗುಲಾಬಿ ಕೊಲೆ ಆರೋಪಿಯನ್ನು ಬಂಧಿಸಿದ ಪೊಲೀಸರು

ಕುಂದಾಪುರ: ಹೆಮ್ಮಾಡಿ ಗುಲಾಬಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮುದೂರು ನಿವಾಸಿ ರವಿರಾಜ್ (31) ಎಂದು ಗುರುತಿಸಲಾಗಿದೆ.

ಹೆಮ್ಮಾಡಿ ಹರೆಗೋಡು ವಿಜಯ ಗೇರುಬೀಜ ಸಮೀಪದ ನಿವಾಸಿ ಗುಲಾಬಿ (55) ಫೆಬ್ರವರಿ 28ರ ತಡರಾತ್ರಿ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಗುಲಾಬಿ ಧರಿಸಿದ್ದ ಚಿನ್ನಾಭರಣಗಳು ಇಲ್ಲದ ಹಿನ್ನೆಲೆಯಲ್ಲಿ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಕತ್ತು ಹಿಸುಕಿ ಉಸಿರುಗಟ್ಟಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗಗೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದರು. ಅಲ್ಲದೇ ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. ಇದೀಗ ಕೊಲೆ ನಡೆದು ಹತ್ತು ದಿನಗಳ ಬಳಿಕ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ

ಹಣಕಾಸಿನ ಹಿನ್ನಲೆಯಲ್ಲಿ ಆರೋಪಿ ರವಿರಾಜ್ ಎಂಬವರು ಫೆ.28ರಂದು ರಾತ್ರಿ ಗುಲಾಬಿ ಮನೆಗೆ ಬಂದಿದ್ದು, ಗುಲಾಬಿ ಕತ್ತಿನಲ್ಲಿದ್ದ ಚಿನ್ನದ ಸರ ಅಡವಿಡಲು ಬೇಡಿಕೆ ಇಟ್ಟಿದ್ದ. ಚೈನ್ ನೀಡಲು ಒಪ್ಪದ ಗುಲಾಬಿ ಕತ್ತಿಗೆ ತನ್ನಲ್ಲಿದ್ದ ಟೆವಲ್ ಸುತ್ತಿ ಉಸಿರುಕಟ್ಟಿಸಿ ಕೊಲೆ ಮಾಡಿದ್ದ. ಈ ಪ್ರಕರಣ ಮಾರ್ಚ್ 1 ರಂದು ಮಧ್ಯಾಹ್ನದ ವೇಳೆಗೆ ಪ್ರಕರಣ ಬೆಳಕಿಗೆ ಬಂದಿತ್ತು. ಮೃತ ಮಹಿಳೆ ಕತ್ತಲ್ಲಿದ್ದ ಚೈನ್, ಬೆಂಡೋಲೆ, ಉಂಗುರ ತೆಗೆದುಕೊಂಡು ಗಿರವಿ ಇಟ್ಟಿರುವುದಾಗಿ ಪೊಲೀಸರ ತನಿಖೆ ಸಮಯ ಆರೋಪಿ ಬಾಯಿ ಬಿಟ್ಟಿದ್ದಾನೆ.

ಉಡುಪಿ ಎಸ್ಪಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಕುಂದಾಪುರ ಡಿಎಸ್ಪಿ ಬಿ.ಪಿ.ದಿನೇಶ್ ಕುಮಾರ್ ನೇತೃತ್ವದಲ್ಲಿ ಕುಂದಾಪುರ ವೃತ್ತನಿರೀಕ್ಷಕ ಮಂಜಪ್ಪ ನೇತೃತ್ವದ ತಂಡ ಕೃತ್ಯಕ್ಕೆ ಬಳಸಿದ ಕಾರನ್ನು ಸಿದ್ದಾಪುರ ಪೆಟ್ರೋಲ್ ಬಂಕ್ ಬಳಿ ವಶಕ್ಕೆ ಪಡೆದಿದ್ದಾರೆ.

ಕೊಲೆ ಪ್ರಕರಣ ವಿಶೇಷ ತಂಡದಲ್ಲಿದ್ದ ಗ್ರಾಮಾಂತರ ಠಾಣೆ ಎಸ್ಸೈ ಶ್ರೀಧರ ನಾಯ್ಕ್, ಕುಂದಾಪುರ ಎಸ್ಸೈ ಹರೀಶ್ ಆರ್.ನಾಯ್ಕ್, ಹೆಡ್ ಕಾನ್ಸ್ಟೇಬಲ್ ವೆಂಕಟರಮಣ ದೇವಾಡಿಗ, ಮಂಜುನಾಥ, ಸೀತಾರಾಮ ಶೆಟ್ಟಿಗಾರ್, ಮೋಹನ್ ಶಿರೂರು, ಮಧು, ಸಂತೋಷ್ ಕುಮಾರ್, ರತ್ನಾಕರ ಶೆಟ್ಟಿ, ಸಂತೋಷ್ ಕೊರವಡಿ, ವಿಜಯಾ, ಸಂತೋಷ್, ಕಾನ್ಸ್ಟೇಬಲ್ ಗಳಾದ ಆದರ್ಶ, ಚಂದ್ರಶೇಖರ ಅರೆಶಿರೂರು, ಶ್ರೀಧರ್, ಸುಜಿತ್, ಚೇತನ್, ಸಚಿನ್ ಶೆಟ್ಟಿ, ತಾಂತ್ರಿಕ ವಿಭಾಗದ ಸಿಬ್ಬಂದಿ ಶಿವಾನಂದ ಕೊಲೆ ಪ್ರಕರಣ ಬೇಧಿಸಲು ಸಹಕರಿಸಿದ್ದಾರೆ.