ಅತ್ತಾವರ ಕೆಎಂಸಿಯಲ್ಲಿ ಯಶಸ್ವಿ ಸೈಟೊರಿಡಕ್ಟಿವ್ ಶಸ್ತ್ರಚಿಕಿತ್ಸೆ ಮತ್ತು ಎಚ್‌ಐಪಿಇಸಿ
ಮಂಗಳೂರು ನವೆಂಬರ್ 19: ಹೊಟ್ಟೆ ಮತ್ತು ವಪೆಗೆ ಸಂಬಂಧಿಸಿದ, ಪೆರಿಟೋನಿಯಲ್ ಸರ್ಫೇಸ್ ಮ್ಯಾಲಿಗ್ನಾನ್ಸಿ ಆಗಿರುವ ಸುಡೊಮೈಕ್ಸೊಮಾ ಪೆರಿಟೋನೈ ಎನ್ನುವ ಅಪರೂಪದ ಮತ್ತು ಸವಾಲೆನಿಸುವ ಅನಾರೋಗ್ಯ ಹೊಂದಿದ್ದ ರೋಗಿಯೊಬ್ಬರಿಗೆ ಸೈಟೊರಿಡಕ್ಟಿವ್ ಸರ್ಜರಿ (ಸಿಆರ್‌ಎಸ್) ಮತ್ತು ಆ ಬಳಿಕ ಹೈಪರ್‌ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕೀಮೋಥೆರಪಿ (ಎಚ್‌ಐಪಿಇಸಿ) ಚಿಕಿತ್ಸೆಗಳನ್ನು ಯಶಸ್ವಿಯಾಗಿ ನೀಡಿ ಗುಣಪಡಿಸುವ ಮೂಲಕ ಕೆಎಂಸಿ ಅತ್ತಾವರದ ಸರ್ಜಿಕಲ್ ಆಂಕಾಲಜಿ ವಿಭಾಗವು ಕರಾವಳಿ ಕರ್ನಾಟಕದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.
ಈ ಸಂಕೀರ್ಣ ಮತ್ತು ಗರಿಷ್ಠ ನಿಖರತೆಯ ಶಸ್ತ್ರಚಿಕಿತ್ಸೆಯನ್ನು ಸರ್ಜಿಕಲ್ ಆಂಕಾಲಜಿಸ್ಟ್ ಡಾ| ದಿಶಿತಾ ಶೆಟ್ಟಿ ಅವರ ನೇತೃತ್ವದಲ್ಲಿ ಮೆಡಿಕಲ್ ಆಂಕಾಲಜಿಸ್ಟ್ ಡಾ| ಮಾಲಿನಿ ಮೋಹನ್, ರೇಡಿಯೇಶನ್ ಆಂಕಾಲಜಿಸ್ಟ್ ಡಾ| ಅಭಿಷೇಕ್ ಕೃಷ್ಣ ಮತ್ತು ಅರಿವಳಿಕೆ ಶಾಸ್ತ್ರಜ್ಞರಾದ ಡಾ| ಅಕ್ಷತಾ ಅವರನ್ನು ಒಳಗೊಂಡ ಬಹು ವೈದ್ಯಕೀಯ ತಂಡದ ಸಮಗ್ರ ಸಹಾಯದೊಂದಿಗೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ, ಅರಿವಳಿಕೆ ಮತ್ತು ತುರ್ತು ನಿಗಾ ವೈದ್ಯಕೀಯ ತಂಡಗಳ ಸಂಯೋಜಿತ ಪ್ರಯತ್ನ ಈ ಚಿಕಿತ್ಸೆಯು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ನಡೆಯುವಂತೆ ಮಾಡಿತು.
ಸುಡೊಮೈಕ್ಸೊಮಾ ಪೆರಿಟೋನೈ ಎಂಬುದು ಅಪರೂಪವಾದ ಒಂದು ಅನಾರೋಗ್ಯವಾಗಿದೆ. ಇದರಲ್ಲಿ ಅಪೆಂಡಿಕ್ಸ್ ಅಥವಾ ಅಂಡಾಶಯದಿಂದ ಉತ್ಪತ್ತಿಯಾದ ಲೋಳೆಸಹಿತ ಗಡ್ಡೆಗಳು ಮತ್ತು ಜೆಲ್ಲಿಯಂತಹ ವಸ್ತು ಪೆರಿಟೋನಿಯಲ್ ಕುಹರದ ಒಳಭಾಗದಲ್ಲಿ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಊತ ಕಾಣಿಸಿಕೊಂಡು ಬೆಳೆಯುತ್ತ ಹೋಗುತ್ತದೆಯಲ್ಲದೆ ಚಿಕಿತ್ಸೆ ನೀಡದೆ ಇದ್ದಲ್ಲಿ ರೋಗಿಯ ಜೀವನ ಗುಣಮಟ್ಟಕ್ಕೆ ತೊಂದರೆ ಉಂಟುಮಾಡುತ್ತದೆ.
ಸೈಟೊರಿಡಕ್ಟಿವ್ ಶಸ್ತ್ರಚಿಕಿತ್ಸೆಯ ಮೂಲಕ ಹೊಟ್ಟೆಯ ಕುಹರದಲ್ಲಿ ಕಂಡುಬರುವ ಗಡ್ಡೆ ಸಂಗ್ರಹಗಳನ್ನು ತೆಗೆದುಹಾಕಲಾಗುತ್ತದೆ. ಇದಾದ ಬಳಿಕ ಎಚ್‌ಐಪಿಇಸಿ ನೀಡಲಾಗುತ್ತದೆ; ಇದರಲ್ಲಿ 60-90 ನಿಮಿಷಗಳ ಕಾಲ ಬಿಸಿಯಾದ ಕಿಮೊಥೆರಪಿಯ ದ್ರಾವಣವನ್ನು ಹೊಟ್ಟೆಯಲ್ಲಿ ಸರಬರಾಜು ಮಾಡಲಾಗುತ್ತದೆ. ಈ ಶಾಖವು ಕಿಮೊಥೆರಪಿಯ ಪರಿಣಾಮಕಾರಿತ್ವ ಮತ್ತು ರೋಗಗುರಿಪಡಿಸುವಿಕೆಯನ್ನು ಹೆಚ್ಚಿಸುವ ಮೂಲಕ ಶಸ್ತ್ರಚಿಕಿತ್ಸೆಯ
ಬಳಿಕವೂ ಉಳಿದಿರಬಹುದಾದ ಗಡ್ಡೆಯ ಸೂಕ್ಷ್ಮ ಕೋಶಗಳನ್ನು ನಾಶಪಡಿಸುತ್ತದೆ.
ಸುಡೊಮೈಕ್ಸೋಮಾ ಪೆರಿಟೋನೈ, ಪೆರಿಟೋನಿಯಲ್ ಮೆಸೊಥೆಲಿಯೋಮಾ ಹಾಗೂ ಅಂಡಾಶಯ ಮತ್ತು ಕರುಳು- ಗುದನಾಳದ ಕೆಲವು ವಿಧವಾದ ನಿರ್ದಿಷ್ಟ ಕ್ಯಾನ್ಸರ್‌ಗಳಿಗೆ ಈ ಸಂಯೋಜಿತ ಚಿಕಿತ್ಸಾ ವಿಧಾನವು ಅತ್ಯಂತ ಆಧುನಿಕ ವಿಧಾನವಾಗಿದೆ ಎಂದು ಡಾ| ದಿಶಿತಾ ಶೆಟ್ಟಿ ವಿವರಿಸಿದ್ದಾರೆ. `ಈ ಚಿಕಿತ್ಸೆಯು ಯಶಸ್ವಿಯಾಗಲು ಅತ್ಯಂತ ಸೂಕ್ಷ್ಮವಾದ ಶಸ್ತ್ರಚಿಕಿತ್ಸಾ ನಿಖರತೆ, ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಮತ್ತು ಆ ಬಳಿಕ ಎಚ್ಚರಿಕೆಯ ನಿಗಾ ಹಾಗೂ ಹಲವು ವೈದ್ಯಕೀಯ ವಿಭಾಗಗಳ ಸಾಮೂಹಿಕ ಪ್ರಯತ್ನ ಅಗತ್ಯವಾಗಿದೆ. ಈ ಪ್ರಕರಣದಲ್ಲಿ ನಾವು ಕಂಡಿರುವ ಯಶಸ್ಸು ಮುಂಚೂಣಿಯ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಿಗೆ ಸರಿಸಾಟಿಯೆನಿಸಬಲ್ಲ ಅತ್ಯಾಧುನಿಕ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ನಡೆಸಬಲ್ಲ ಅತ್ತಾವರ ಕೆಎಂಸಿ ಆಸ್ಪತ್ರೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ' ಎಂದು ಡಾ| ದಿಶಿತಾ ಹೇಳಿದ್ದಾರೆ.
ಕ್ಯಾನ್ಸರ್ ಆರೈಕೆಯಲ್ಲಿ ಗಮನಾರ್ಹ ಪ್ರಗತಿಯನ್ನು ಈ ಯಶಸ್ವಿ ಶಸ್ತ್ರಚಿಕಿತ್ಸೆಯು ಸಾಬೀತುಪಡಿಸಿದ್ದು, ಸಮಗ್ರ
ಆಂಕಾಲಜಿ ಚಿಕಿತ್ಸೆ ಮತ್ತು ಆರೈಕೆಯಲ್ಲಿ ಅತ್ತಾವರ ಕೆಎಂಸಿಯ ಮುಂಚೂಣಿ ಸ್ಥಾನವನ್ನು ಖಚಿತಪಡಿಸಿದೆ. ಶಸ್ತ್ರಚಿಕಿತ್ಸೆ, ವೈದ್ಯಕೀಯ ಮತ್ತು ರೇಡಿಯೇಶನ್ ಆಂಕಾಲಜಿ ಕ್ಷೇತ್ರಗಳಲ್ಲಿ ನಿಪುಣ ತಜ್ಞರನ್ನು ಹೊಂದಿರುವ ಅತ್ತಾವರ ಕೆಎಂಸಿ ಆಸ್ಪತ್ರೆಯು ಜಾಗತಿಕ ಗುಣಮಟ್ಟದ ಚಿಕಿತ್ಸೆಯ ವಿಧಾನಗಳನ್ನು ಒದಗಿಸುವ ಮೂಲಕ ಅತ್ಯುತ್ತಮ ಫಲಿತಾಂಶ ಪಡೆದು ಜನರ ಜೀವನ ಗುಣಮಟ್ಟವನ್ನು ವೃದ್ಧಿಸಲು ಕಟಿಬದ್ಧವಾಗಿದೆ.
ಜಾಗತಿಕ ದರ್ಜೆಯ ಆಂಕಾಲಜಿ ಚಿಕಿತ್ಸೆ ಮತ್ತು ಆರೈಕೆಯನ್ನು ಒದಗಿಸುವ ಸಾಮರ್ಥ್ಯವನ್ನು ಹಾಗೂ ಕರಾವಳಿ
ಕರ್ನಾಟಕದಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಯ ಕೇಂದ್ರವಾಗಿರುವುದನ್ನು ಅತ್ತಾವರ ಕೆಎಂಸಿಯು ಈ ಮೂಲಕ ಸಾಬೀತುಪಡಿಸಿದೆ.













